ಭಾರತದ ಮೋಸ್ಟ್ ವಾಂಟೆಡ್ ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಪಿಸ್ತೂಲ್ ಬಂಧನ| Salim Pistol

Salim Pistol
Published on

Salim Pistol: ಭಾರತದ ಮೋಸ್ಟ್ ವಾಂಟೆಡ್ ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಪಿಸ್ತೂಲ್ ಎಂದು ಕರೆಯಲ್ಪಡುವ ಶೇಖ್ ಸಲೀಂನನ್ನು ದೆಹಲಿ ಪೊಲೀಸರ ವಿಶೇಷ ದಳ ಮತ್ತು ಭದ್ರತಾ ಸಂಸ್ಥೆಗಳ ಸಮನ್ವಯದೊಂದಿಗೆ ನೇಪಾಳದಲ್ಲಿ ಬಂಧಿಸಲಾಗಿದೆ.

2018 ರಲ್ಲಿ ಸಲೀಂ ಪರಾರಿಯಾಗಿದ್ದ. ಸಲೀಂ ಭಾರತಕ್ಕೆ ಜಿಗಾನಾ ಪಿಸ್ತೂಲ್‌ಗಳನ್ನು ತಂದ ಮೊದಲ ವ್ಯಕ್ತಿ. ಅಲ್ಲದೆ, ಹಲವಾರು ದರೋಡೆಕೋರರಿಗೆ ಪಿಸ್ತೂಲ್​ಗಳನ್ನು ಪೂರೈಸುತ್ತಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಐಎಸ್‌ಐ ಜೊತೆ ನಂಟು?

ಸಲೀಂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ದಾವೋದ್​ ಕಂಪನಿಯ ಭೂಗತ ಜಾಲದೊಂದಿಗೆ ಆಳವಾದ ಸಂಬಂಧ ಹೊಂದಿದ್ದಾನೆಂದು ತಿಳಿದು ಬಂದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪಿಗಳಲ್ಲಿ ಪಟ್ಟಿಯಲ್ಲಿ ಈತನೂ ಒಬ್ಬನಾಗಿದ್ದು, ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದ ಕೇಸ್​ನಲ್ಲಿ ಈತನ ಹೆಸರು ಈ ಹಿಂದೆ ಕೇಳಿಬಂದಿತ್ತು.

ಹಲವು ವರ್ಷಗಳಿಂದ, ಸಲೀಂ ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಸೇರಿದಂತೆ ಉನ್ನತ ಮಟ್ಟದ ಅಪರಾಧಿಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಎಂದು ತಿಳಿದು ಬಂದಿದೆ.

ಸಲೀಂನ ಅಪರಾಧ ಚಟುವಟಿಕೆಗಳು

2011 ರಲ್ಲಿ ದೆಹಲಿಯ ಜಾಫ್ರಾಬಾದ್‌ನಲ್ಲಿ ನಡೆದ ಸಶಸ್ತ್ರ ದರೋಡೆಯಲ್ಲಿ ಭಾಗವಹಿಸಿದ್ದನು. ಈ ಸಂದರ್ಭದಲ್ಲಿ 20 ಲಕ್ಷ ರೂ.ಗಳನ್ನು ಲೂಟಿ ಮಾಡಲಾಯಿತು. ಸಲೀಂನನ್ನು 2013 ರಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. 2018 ರ ಹೊತ್ತಿಗೆ, ಅವನು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದನು. ಆದರೆ, ಆ ವರ್ಷ ಬಂಧಿಸಲ್ಪಟ್ಟ ನಂತರ, ಜಾಮೀನಿನ ಮೇಲೆ ಹೊರಬಂದಾಗ ವಿದೇಶಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾದನು.

ಜಿಗಾನ ಪಿಸ್ತೂಲ್ ನೆಟ್‌ವರ್ಕ್

ಟರ್ಕಿಶ್ ನಿರ್ಮಿತ ಜಿಗಾನಾ ಪಿಸ್ತೂಲ್ ಅನ್ನು ಭಾರತೀಯ ದರೋಡೆಕೋರರು ಪ್ರಮುಖ ಆಯುಧವನ್ನಾಗಿ ಮಾಡುವಲ್ಲಿ ಸಲೀಂ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಪಾಕಿಸ್ತಾನದಿಂದ ನೇಪಾಳಕ್ಕೆ ಶಸ್ತ್ರಾಸ್ತ್ರಗಳು ಬರುತ್ತಿದ್ದವು, ನಂತರ ಅವುಗಳನ್ನು ಭಾರತಕ್ಕೆ ತರಲಾಗುತ್ತಿತ್ತು. ಪತ್ತೆ ಹಚ್ಚುವುದನ್ನು ತಪ್ಪಿಸಲು, ಪಿಸ್ತೂಲ್‌ಗಳನ್ನು ಪ್ರತ್ಯೇಕ ಭಾಗಗಳಾಗಿ ಬಿಚ್ಚಿ ವಾಹನಗಳಲ್ಲಿ ಮರೆಮಾಡಲಾಗುತ್ತಿತ್ತು. ಭಾರತದೊಳಗೆ ಬಂದ ನಂತರ, ಅವುಗಳನ್ನು ಮತ್ತೆ ಜೋಡಿಸಿ ಮಾರಾಟ ಮಾಡಲಾಗುತ್ತಿತ್ತು.

ನೇಪಾಳ ಮೂಲಕ ಕಳ್ಳಸಾಗಣೆ ಮಾಡಿದ ಜಿಗಾನಾ ಪಿಸ್ತೂಲ್ ಸುಮಾರು 6 ಲಕ್ಷ ರೂ.ಗಳಿಗೆ ಮಾರಾಟವಾದರೆ, ಡ್ರೋನ್‌ಗಳ ಮೂಲಕ ಭಾರತಕ್ಕೆ ತಂದ ಜಿಗಾನಾ ಪಿಸ್ತೂಲ್ ಸುಮಾರು 4 ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿದ್ದವು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net