ಭಾರತದ ಜಿ-20 ನಾಯಕತ್ವದಲ್ಲಿ ಡಿಪಿಐ ವ್ಯಾಖ್ಯಾನ, ಚೌಕಟ್ಟು, ತತ್ವಗಳ ಮೇಲೆ ಐತಿಹಾಸಿಕ ಜಾಗತಿಕ ಒಮ್ಮತ: ರಾಜೀವ್ ಚಂದ್ರಶೇಖರ್

Rajeev Chandrashekhar
Published on

ನವದೆಹಲಿ: ರಾಷ್ಟ್ರಗಳ ನಡುವಿನ ಒಮ್ಮತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಸೈಬರ್ ಭದ್ರತೆ ಮತ್ತು ಡಿಜಿಟಲ್ ಕೌಶಲ್ಯ ಎಂಬ ಮೂರು ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಕೇಂದ್ರೀಕರಿಸಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಇಂದು ಮಾಧ್ಯಮದವರ ಜತೆ ಸಂವಾದ ನಡೆಸಿದ ಅವರು, ಆಗಸ್ಟ್​​ನಲ್ಲಿ ನಡೆದ ಡಿಜಿಟಲ್ ಆರ್ಥಿಕ ಸಚಿವರ ಸಭೆಯ ಮಹತ್ವದ ಫಲಿತಾಂಶಗಳ ಬಗ್ಗೆ ಚರ್ಚಿಸಿದರು. ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಡಿಜಿಟಲ್ ಆರ್ಥಿಕ ಸಚಿವರು ಭವಿಷ್ಯದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (ಡಿಪಿಐ) ಹೇಗೆ ಪರಿಣಾಮಕಾರಿಯಾಗಿ ರೂಪಿಸಬೇಕು ಎಂಬುದರ ಕುರಿತು ಅದ್ಭುತ ಒಮ್ಮತವನ್ನು ಹೇಗೆ ತಲುಪಿದರು ಎಂಬುದನ್ನು ಅವರು ವಿವರಿಸಿದರು.

ಡಿಪಿಐಗಳು ಮೊದಲ ಬಾರಿಗೆ ಜಾಗತಿಕ ಒಮ್ಮತ ತಲುಪಿದ್ದು, ಅವುಗಳ ವ್ಯಾಖ್ಯಾನ, ಚೌಕಟ್ಟು ಮತ್ತು ತತ್ವಗಳು ಏನಾಗಿರಬೇಕು ಎಂಬುದು ಜಿ-20 ಸಂದರ್ಭದಲ್ಲಿ ಬಹುಚರ್ಚಿತ ವಿಷಯ. ಪ್ರಗತಿ ಮತ್ತು ಬೆಳವಣಿಗೆಗಾಗಿ ತಾಂತ್ರಿಕ ಸಾಧನಗಳನ್ನು ಬಳಸಿದ ಮತ್ತು ನಿಯೋಜಿಸಿದ ಭಾರತದ ಈ ಕ್ರಮ ಇದೀಗ ಅಧ್ಯಯನಯೋಗ್ಯ ಪ್ರಕರಣ. ಡಿಪಿಐಗಳಲ್ಲಿ ಭಾರತದ ಮುನ್ನಡೆಯನ್ನು ಹಿಂದುಳಿದ ದೇಶಗಳು ಮಾರ್ಗವಾಗಿ ಅನುಸರಿಸುತ್ತವೆ ಎಂದು ಸಚಿವರು ಹೇಳಿದರು.

ಭಾರತವು ಅರ್ಮೇನಿಯಾ, ಸಿಯೆರಾ ಲಿಯೋನ್, ಸುರಿನಾಮ್, ಆಂಟಿಗುವಾ, ಬಾರ್ಬಡೋಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಪಪುವಾ ನ್ಯೂ ಗಿನಿಯಾ ಮತ್ತು ಮಾರಿಷಷ್​ನಂತಹ ದೇಶಗಳೊಂದಿಗೆ ಎಂಟು ತಿಳುವಳಿಕಾ ಒಡಂಬಡಿಕೆಗಳನ್ನು (ಎಂಒಯು) ಮಾಡಿಕೊಂಡಿದೆ. ಈ ರಾಷ್ಟ್ರಗಳು ಈಗ ತಮ್ಮ ಗಡಿಯೊಳಗೆ ಈ ಸಂಪನ್ಮೂಲಗಳನ್ನು ಅಳವಡಿಸಿಕೊಳ್ಳಲು ಮತ್ತು ಬಳಸಿಕೊಳ್ಳಲು ಅವಕಾಶ ಹೊಂದಿವೆ ಎಂದರು.

ಡಿಪಿಐಗಳ ಹೊರತಾಗಿ, ದೇಶಗಳು ಸೈಬರ್ ಸುರಕ್ಷತೆಗೆ ಹೇಗೆ ಆದ್ಯತೆ ನೀಡಿವೆ ಎಂಬುದರ ಬಗ್ಗೆ ಸಚಿವರು ವಿವರಿಸಿದರು. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಅದರ ಮಹತ್ವದ ಕುರಿತು ಮಾತನಾಡಿದ ಅವರು, ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಜಿ-20 ಡಿಜಿಟಲ್ ಆರ್ಥಿಕ ಸಚಿವರು ವ್ಯಾಪಕ ಚರ್ಚೆ ನಡೆಸಿದ್ದಾರೆ. ಸೈಬರ್ ಸುರಕ್ಷತೆ ವಿಶ್ವದ ಎಲ್ಲಾ ದೇಶಗಳಿಗೆ ಒಂದು ಪ್ರಮುಖ ವಿಷಯವಾಗಿದೆ. ಏಕೆಂದರೆ ಡಿಜಿಟಲ್ ಆರ್ಥಿಕತೆಯು ಆರ್ಥಿಕ ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ದೊಡ್ಡ ಅಂಶವಾಗುತ್ತಿದೆ ಎಂದರು.

ಕೋವಿಡ್ ನಂತರದ ಈ ಡಿಜಿಟಲ್ ಜಗತ್ತಿನಲ್ಲಿ ಡಿಜಿಟಲ್ ಕೌಶಲ್ಯಗಳು ಹೆಚ್ಚು ಅಗತ್ಯವಾಗಿವೆ. ಭಾರತದ ಪ್ರತಿಭೆಗಳು ನಮ್ಮ ಯುವಕರಿಗೆ ಡಿಜಿಟಲ್ ಕೌಶಲ್ಯಗಳನ್ನು ಸೃಷ್ಟಿಸುವತ್ತ ಗಮನ ಹರಿಸಿವೆ. ಇದು ಈ ಚರ್ಚೆಯ ಸಮಯದಲ್ಲಿ ಪ್ರತಿಧ್ವನಿಸಿದ ವಿಷಯವಾಗಿದೆ. ಮುಂಬರುವ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಸವಾಲುಗಳನ್ನು ಎದುರಿಸಲು ಡಿಜಿಟಲ್ ಹಾಗೂ ಭವಿಷ್ಯಕ್ಕೆ ಸಿದ್ಧವಾದ ಕೌಶಲ-ಪ್ರತಿಭೆಗಳನ್ನು ರಚಿಸಲು ಅನೇಕ ದೇಶಗಳು ಪರಸ್ಪರ ಮತ್ತು ಭಾರತದೊಂದಿಗೆ ಪಾಲುದಾರರಾಗಲು ಆಸಕ್ತಿ ಹೊಂದಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net