

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಗೂ ಮೊದಲೇ ಸರಯೂ ನದಿಯಲ್ಲಿ ಸೋಲಾರ್ ಬೋಟ್ ಸಂಚಾರಕ್ಕೆ ಸಿದ್ದವಾಗಿದೆ. ಈ ಸೋಲಾರ್ ಬೋಟ್ನಲ್ಲಿ 30 ಪ್ರಯಾಣಿಕರು ಕುಳಿತು ಸಂಚರಿಸಬಹುದಾಗಿದೆ. ಇದು ನಯಾ ಘಾಟ್ನಿಂದ ಕಾರ್ಯನಿರ್ವಹಿಸುತ್ತದೆ.
ಸರಯೂ ಘಾಟ್ನ ದಡದಲ್ಲಿ ಈ ಸೋಲಾರ್ ಬೋಟ್ ಅನ್ನು ವ್ಯವಸ್ಥೆ ಮಾಡಲಾಗಿದೆ. ಅದರ ಬಿಡಿ ಭಾಗಗಳು ಮತ್ತು ಇತರ ಪರಿಕರಗಳನ್ನು ದೇಶದ ವಿವಿಧ ಮೂಲೆಗಳಿಂದ ತರಿಸಿಕೊಂಡು ಸಿದ್ಧಪಡಿಸಲಾಗಿದೆ ಎಂದು ಯುಪಿಎನ್ಇಡಿಎ ಮಾಹಿತಿ ಒದಗಿಸಿದೆ.
ಪ್ರಸ್ತುತ ಒಂದು ಸೋಲಾರ್ ಬೋಟ್ ಅನ್ನು ಸಂಪೂರ್ಣವಾಗಿ ಜೋಡಿಸಲಾಗಿದ್ದು ಇದು ಪರೀಕ್ಷಾ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
ಅಯೋಧ್ಯೆಯನ್ನು ಮಾದರಿ ಸೌರ ನಗರವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಸೋಲಾರ್ ಬೋಟ್ ಅನ್ನು ಉತ್ತರ ಪ್ರದೇಶದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಂಸ್ಥೆ (ಯುಪಿಎನ್ಇಡಿಎ) ಸಿದ್ಧಪಡಿಸಿದೆ.
ಜನವರಿ 22 ರಂದು ರಾಮಮಂದಿರದಲ್ಲಿ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಸೌರಶಕ್ತಿ ಚಾಲಿತ ದೋಣಿಯನ್ನು ಉದ್ಘಾಟನೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ದೋಣಿಯು 3.3-ಕಿಲೋವ್ಯಾಟ್ ರೂಫ್ಟಾಪ್ ಸೌರ ಫಲಕಗಳಿಂದ ಚಾಲಿತವಾಗಿದೆ ಮತ್ತು ದೋಣಿಯ ಮೇಲ್ಛಾವಣಿಯಲ್ಲಿ ಆರು ಸೌರ ಫಲಕಗಳನ್ನು ಅಳವಡಿಸಲಾಗಿದೆ, ಇದು 550 ವ್ಯಾಟ್ಗಳ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಪೂರ್ಣ ಚಾರ್ಜ್ನಲ್ಲಿ ಬೋಟ್ ಐದರಿಂದ ಆರು ಗಂಟೆಗಳ ಕಾಲ ಪ್ರೊಪಲ್ಷನ್ ಟೈಮ್ಫ್ರೇಮ್ ಅನ್ನು ನಿರ್ವಹಿಸುತ್ತದೆ.