ಗ್ರಾಹಕರ ಸೇವೆಗಾಗಿ ವಿಡಿಯೋ ಕಾಲ್​​​ ಸೌಲಭ್ಯ, ಈ ಬ್ಯಾಂಕಲ್ಲಿ ಇನ್ಮುಂದೆ ದಿನದ 24 ಗಂಟೆ/ 365 ದಿನವೂ ಸೇವೆ

bc
Published on

ರಾಜಸ್ಥಾನ ಮೂಲದ ಎಯು ಸ್ಮಾಲ್‌ ಫೈನಾನ್ಸ್‌ (SFB) ಎಂಬ ಬ್ಯಾಂಕ್‌ ತನ್ನೆಲ್ಲಾ ಗ್ರಾಹಕರಿಗೆ ವರ್ಷದ 365 ದಿನಗಳವರೆಗೆ 24 ಗಂಟೆಯೂ ವಿಡಿಯೋ ಬ್ಯಾಂಕಿಂಗ್‌ ಸೌಲಭ್ಯವನ್ನು ಒದಗಿಸಿದೆ. ಈ ಮೂಲಕ ಇಂಥ ಸೌಲಭ್ಯ ಒದಗಿಸಿದ ಭಾರತದ ಮೊದಲ ಬ್ಯಾಂಕ್‌ ಎನಿಸಿಕೊಂಡಿದೆ. ಈ ವಿಡಿಯೋ ಬ್ಯಾಂಕಿಗ್‌ ಸೌಲಭ್ಯದ ಮೂಲಕ ನೂತನ ಬ್ಯಾಂಕ್‌ ಖಾತೆ ತೆರೆಯುವುದು ಹಾಗೂ ಕೆವೈಸಿ ಸೇರಿದಂತೆ ತಮ್ಮ ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದ 400ಕ್ಕೂ ಅಧಿಕ ಸಮಸ್ಯೆಗಳನ್ನು ಗ್ರಾಹಕರು ಸರಿ ಪಡಿಸಿಕೊಳ್ಳಬಹುದಾಗಿದೆ.


ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕ್ರೆಡಿಟ್‌ ಕಾರ್ಡ್‌ , ಸಾಲ, ಉಳಿತಾಯ, ಡಿಜಿಟಲ್‌ ಉಳಿತಾಯ, ಮೂಲ ಸೇವಾ ಉಳಿತಾಯ ಮತ್ತು ಚಾಲ್ತಿ ಖಾತೆ ಸೇರಿದಂತೆ ಎಲ್ಲ ಅಂಶಗಳ ಕುರಿತ ವ್ಯವಹಾರ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಸೌಲಭ್ಯವು ಲಭ್ಯವಾಗಲಿದೆ’ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಉತ್ತಮ್‌ ತೆಬ್ರಿವಾಲ್‌ ಮಾಹಿತಿ ನೀಡಿದ್ದಾರೆ. ಪ್ರಧಾನ್‌ ಮಂತ್ರಿ ಜನ್‌ಧನ್‌ ಖಾತೆದಾರರೂ ಈ ವಿಡಿಯೋ ಬ್ಯಾಂಕಿಂಗ್‌ ಸೌಲಭ್ಯ ಪಡೆಯಬಹುದಾಗಿದೆ.


ಬ್ಯಾಂಕಿನ ಕೇಂದ್ರ ಕಚೇರಿ ರಾಜಸ್ಥಾನದ ಜೈಪುರದಲ್ಲಿದೆ. ವಿಶೇಷವೆಂದರೆ ಕರೆಯಲ್ಲಿ ಖಾತೆದಾರ ಗ್ರಾಹಕರೇ ಮಾತನಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಎಐ ಮೂಲಕ ಗ್ರಾಹಕ ಮುಖ ಪತ್ತೆಮಮಾಡುವ ತಂತ್ರಜ್ಞಾನವನ್ನೂ ಈ ಬ್ಯಾಂಕ್‌ ಅಳವಡಿಸಿಕೊಂಡಿದೆ.ಆದ್ರೆ ಚೆಕ್​, ಠೇವಣಿ ಸೇರಿದಂತೆ ಯಾವುದೇ ರೀತಿಯ ನಗದು ಸಂಬಂಧಿತ ವ್ಯವಹಾರಗಳನ್ನು ವಿಡಿಯೋ ಬ್ಯಾಂಕಿಂಗ್‌ನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net