ಕೆರೆ ಪುನರುಜ್ಜೀವನಗೊಳಿಸಿದ ಬೆಂಗಳೂರು ವಿದ್ಯಾರ್ಥಿಗಳ ಶ್ರಮಕ್ಕೆ ಬೆನ್ನುತಟ್ಟಿದ ವಿಶ್ವಸಂಸ್ಥೆ ಭಾರತೀಯ ರಾಯಭಾರಿ

UN Bng Student
Published on

ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ರಾಜಧಾನಿ ಬೆಂಗಳೂರಿನ ಕೆರೆಯೊಂದನ್ನು ಪುನರುಜ್ಜೀವನಗೊಳಿಸಿದ ನಾಲ್ವರು ಶಾಲಾ ಮಕ್ಕಳ ಶ್ರಮಕ್ಕೆ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಮತ್ತು ಶಾಶ್ವತ ಪ್ರತಿನಿಧಿ ಸೈಯದ್​ ಅಕ್ಬರುದ್ದಿನ್​ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಟ್ವೀಟ್​ ಮಾಡಿರುವ ಅಕ್ಬರುದ್ದಿನ್​, ಭಾರತದಲ್ಲಿ ಶಾಲಾ ಮಕ್ಕಳ ನಡುವೆ ಹವಾಮಾನ ಕ್ರಿಯಾಶೀಲತೆಯನ್ನು ಬೆಳೆಯುತ್ತಿದೆ. ಬೆಂಗಳೂರಿನ ನಾಲ್ವರು ಮಕ್ಕಳು ನ್ಯೂಯಾರ್ಕ್​ನ ವಿಶ್ವಸಂಸ್ಥೆಯ ಭಾರತೀಯ ಕಚೇರಿಗೆ ಆಗಮಿಸಿದ್ದು, 4.5 ಎಕರೆ ಮಾನೆ ಕೆರೆಯನ್ನು ಪುನರುಜ್ಜೀವನಗೊಳಿಸಲು ನೆರವಾದ ಅನುಭವನ್ನು ಹಂಚಿಕೊಂಡಿದ್ದಾರೆ. ಅವರಿಗೆ ಹೆಚ್ಚಿನ ಶಕ್ತಿ ತುಂಬಿ ಎಂದು ಬರೆದುಕೊಂಡಿದ್ದಾರೆ.

ಯಥಾರ್ಥ್​ ಮೂರ್ತಿ, ಮಿಶ್ತಿ ಕೆವಲ್ರಾಮನಿ, ಮೈತ್ರಿ ಪಟೇಲ್​ ಮತ್ತು ಇರಾ ಭ್ರುಗುವಾರ್ ಎಂಬ 8ನೇ ತರಗತಿ ವಿದ್ಯಾರ್ಥಿಗಳನ್ನು ಅಕ್ಬರುದ್ದಿನ್​ ಅವರು ಭೇಟಿ ಮಾಡಿದ್ದಾರೆ. ಇವರು ವಿದ್ಯಾಶಿಲ್ಪ್​ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನೆ ಕೆರೆ ಪುನರುಜ್ಜೀವನ ಯೋಜನೆಯನ್ನು ಪ್ರಸ್ತುತ ಪಡಿಸಿದ್ದಾರೆ. ಇವರೊಂದಿಗೆ ಆಗಮಿಸಬೇಕಾಗಿದ್ದ ಶಿಕ್ಷಕಿ ಅನಿಕಾ ಸಾಹಾ ಕಾರಣಾಂತರಗಳಿಂದ ಅಮೆರಿಕಗೆ ತೆರಳಲು ಸಾಧ್ಯವಾಗಲಿಲ್ಲ.

ಮಾನೆ ಕೆರೆಯು ಕನಕಪುರ ರಸ್ತೆಯ ಬದಿಯಲ್ಲಿದ್ದು, 2019ರ ಅಕ್ಟೋಬರ್​ನಲ್ಲಿ 23 ದಿನಗಳಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಸಂರಕ್ಷಣಾವಾದಿ ಆನಂದ್​ ಮಲ್ಲಿಗವಾಡ್​ ಅವರ ಮಾರ್ಗದರ್ಶನದ ಮೂಲಕ ಕೆರೆಯನ್ನು ಎನ್​ಜಿಒ ಒಂದರ ಸಹಯೋಗದಲ್ಲಿ ವಿದ್ಯಾರ್ಥಿಗಳು ಪುನರುಜ್ಜೀವನಗೊಳಿಸಿದ್ದಾರೆ.

ಸುಸ್ಥಿರ ಜೀವನ ಪರ ವಿದ್ಯಾರ್ಥಿಗಳು ಬ್ಯಾಟ್​ ಬೀಸಿದ್ದು, ಇಂದು ಹವಾಮಾನದಲ್ಲಾಗುತ್ತಿರುವ ತೀವ್ರತರವಾದ ಬದಲಾವಣೆಗಳಿಗೆ ಮಾನವನೇ ಕಾರಣ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಅರಣ್ಯ ನಾಶ ಮತ್ತು ಆಸ್ಟ್ರೇಲಿಯಾದ ಭೀಕರ ಕಾಡ್ಗಿಚ್ಚು ಮಾನವ ಎಸಗಿದ ಪ್ರಮಾದದ ಫಲಿತಾಂಶವಾಗಿದೆ. ಹವಾಮಾನ ಬದಲಾವಣೆ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದು, ಅವರ ಶ್ರಮ ವಿಶ್ವಸಂಸ್ಥೆಯ ಮಟ್ಟದಲ್ಲಿ ಗುರುತಿಸಿರುವುದು ಗಮನಾರ್ಹವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net