ಭಾರತದ ಡಿಜಿಟಲ್ ಆರ್ಥಿಕತೆ ವಿಶ್ವವಂದ್ಯ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

g20
Published on

ಬೆಂಗಳೂರು: ಭಾರತದ ಡಿಜಿಟಲ್ ಆರ್ಥಿಕತೆಯ ಪರಿವರ್ತನೆ ಹಾಗೂ ಬದ್ಧತೆಯು ಡಿಜಿಟಲ್ ಅಭಿವೃದ್ಧಿಯ ಒಳಗೊಳ್ಳುವಿಕೆ ಸಂಕೇತ. ಇಂತಹ ಮೌಲ್ಯಯುತ ಬದಲಾವಣೆ ಪರ್ವಕ್ಕೆ ತೆರೆದುಕೊಳ್ಳುವ ಸನ್ನಿವೇಶದಲ್ಲಿ ಡಿಜಿಟಲ್ ಆರ್ಥಿಕತೆ ಕುರಿತು ಚರ್ಚಿಸಲು ಬೆಂಗಳೂರಿಗಿಂತ ಉತ್ತಮ ಸ್ಥಳವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಾನ ನಗರಿಯ ಬೆಳವಣಿಗೆಗೆ ಕನ್ನಡಿ ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಜಿ 20 ರಾಷ್ಟ್ರಗಳ ಆರ್ಥಿಕ ಸಚಿವರ ಸಭೆಗೆ ಶನಿವಾರ ವರ್ಚುಯಲ್ ಮೂಲಕ ಸಂದೇಶ ನೀಡಿದ ಅವರು, ಪ್ರಪಂಚದಾದ್ಯಂತದ ಗಣ್ಯರು ಭಾಗವಹಿಸಿರುವ ಈ ಐತಿಹಾಸಿಕ ಕಾರ್ಯಕ್ರಮವು ಡಿಜಿಟಲ್ ಆರ್ಥಿಕತೆಯ ಭವಿಷ್ಯದ ಬಗ್ಗೆ ಚರ್ಚಿಸಲು ಉತ್ತಮ ವೇದಿಕೆಯನ್ನು ಒದಗಿಸಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಕೇಂದ್ರವಾಗಿ ಬೆಂಗಳೂರಿನ ಸ್ಥಾನಮಾನಕ್ಕೆ ಒತ್ತು ನೀಡಿದೆ ಎಂದು ಹೇಳಿದರು.

2015ರಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಆರಂಭಿಸುವುದರೊಂದಿಗೆ ಭಾರತದ ಡಿಜಿಟಲೀಕರಣದ ಪ್ರಯಾಣಕ್ಕೆ ನಾಂದಿ ಹಾಡಲಾಯಿತು. ನಾವೀನ್ಯತೆ, ತ್ವರಿತ ಅನುಷ್ಠಾನ ಮತ್ತು ಸೇರ್ಪಡೆಯ ಮನೋಭಾವದಿಂದಾಗಿ ಈ ರೂಪಾಂತರದ ಪ್ರಮಾಣ, ವೇಗ ಮತ್ತು ವ್ಯಾಪ್ತಿ ಕಲ್ಪನೆಗೆ ಮೀರಿದೆ ಎಂದು ಬಣ್ಣಿಸಿದರು.

ಡಿಜಿಟಲ್ ಪಾವತಿಯಲ್ಲಿ ಶೇ.45 ಪಾಲು:

ದೇಶದಲ್ಲಿ 850 ದಶಲಕ್ಷಕ್ಕೂ ಹೆಚ್ಚು ಇಂಟರ್‌ನೆಟ್ ಬಳಕೆದಾರರಿದ್ದಾರೆ. 1.3 ಶತಕೋಟಿ ನಾಗರಿಕರನ್ನು ಒಳಗೊಂಡಿರುವ ಜನ್‌ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ ಟ್ರಿನಿಟಿ ಕ್ರಾಂತಿಕಾರಿ ಆರ್ಥಿಕ ಸೇರ್ಪಡೆ, ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಸುಮಾರು 10 ಶತಕೋಟಿ ಮಾಸಿಕ ವಹಿವಾಟುಗಳನ್ನು ಒಳಗೊಂಡಿರುವ ಆಧಾರ್‌ನಂತಹ ನವೀನ ಕಾರ್ಯಕ್ರಮಗಳ ಜತೆಗೆ ವಿಶ್ವದಲ್ಲಾಗುವ ಡಿಜಿಟಲ್ ಪಾವತಿಯಲ್ಲಿ ಶೇ.45 ಪಾಲು ಭಾರತ ಹೊಂದಿರುವುದು ಹೆಗ್ಗಳಿಕೆಯ ವಿಚಾರ ಎಂದು ಪ್ರತಿಪಾದಿಸಿದರು.

ಎಐ ವೇದಿಕೆ ಮೂಲಕ ಮತ್ತಷ್ಟು ಎತ್ತರಕ್ಕೆ:

ಕೋವಿಡ್ ಲಸಿಕೆ ಅಭಿಯಾನದ ವೇಳೆ ಕೋವಿನ್ ಪೋರ್ಟಲ್ ಮೂಲಕ ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ಸ್‌ಗಾಗಿ ಗತಿ-ಶಕ್ತಿ ವೇದಿಕೆ, ಪಾರದರ್ಶಕ ಸಂಗ್ರಹಣೆಗಾಗಿ ಸರ್ಕಾರಿ ಇ-ಮಾರುಕಟ್ಟೆ ವ್ಯವಸ್ಥೆ, ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್, ಇ-ಕಾಮರ್ಸ್, ಡಿಜಿಟಲೈಸ್ಡ್ ತೆರಿಗೆ ವ್ಯವಸ್ಥೆಗಳು ಪಾರದರ್ಶಕತೆಯನ್ನು ಉತ್ತೇಜಿಸಿವೆ. ಮುಂಬರುವ ಎಐ ಚಾಲಿತ ಭಾಷಾ ಅನುವಾದ ವೇದಿಕೆ ‘ಭಾಷಿಣಿ’ ನಮ್ಮ ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವನಾಯಕರಿಗೆ ಮನವರಿಕೆ ಮಾಡಿಕೊಟ್ಟರು.

ಭಾರತದ ಭೌಗೋಳಿಕತೆ ವೈವಿಧ್ಯತೆಯಿಂದ ಕೂಡಿದ್ದು, ಇಲ್ಲಿ ಸೃಜನೆಗೊಳ್ಳುವ ಚಿಂತನೆಗಳು ಇಡೀ ಜಗತ್ತಿಗೆ ಪ್ರಯೋಜನಕಾರಿಯಾಗಬಲ್ಲ, ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳಿಗೆ ಸೂಕ್ತವಾದ ಪ್ರಯೋಗಶಾಲೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಶೇಷವಾಗಿ ಗ್ಲೋಬಲ್ ಸೌತ್‌ನಲ್ಲಿರುವ ರಾಷ್ಟ್ರಗಳಿಗೆ ಆರ್ಥಿಕತೆ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಗ್ಲೋಬಲ್ ಪಬ್ಲಿಕ್ ಡಿಜಿಟಲ್ ಗೂಡ್ಸ್ ರೆಪೋಸಿಟರಿ ವೇದಿಕೆ ‘ಇಂಡಿಯಾ ಸ್ಟಾಕ್’ ಅನ್ನು ರಚಿಸುವುದಾಗಿ ಅವರು ಘೋಷಿಸಿದರು. ಇದರಿಂದ ಡಿಜಿಟಲ್ ಕೌಶಲ್ಯಗಳ ದೇಶ-ದೇಶದ ಹೋಲಿಕೆಯನ್ನು ಸುಲಭಗೊಳಿಸುವ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಡಿಜಿಟಲ್ ಸ್ಕಿಲ್ಲಿಂಗ್‌ನಲ್ಲಿ ‘ವರ್ಚುವಲ್ ಸೆಂಟರ್ ಆಫ್ ಎಕ್ಸಲೆನ್ಸ್’ ಕಲ್ಪನೆಯನ್ನು ಅವರು ಸ್ವಾಗತಿಸಿದರು.

ಡಿಜಿಟಲ್ ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಅನುಕುಲವಾಗುವಂತೆ ಉನ್ನತ ಮಟ್ಟದ ತತ್ತ್ವಗಳನ್ನು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಡಿಜಿಟಲ್ ಆರ್ಥಿಕತೆಗಾಗಿ ಅಭಿವೃದ್ಧಿಪಡಿಸುವತ್ತ ಜಿ 20 ವೇದಿಕೆ ಹೆಚ್ಚು ಗಮನಹರಿಸಬೇಕು. ಇದರಿಂದಾಗಿ ಈ ಕ್ಷೇತ್ರದಲ್ಲಿ ಜಗತ್ತು ಎದುರಿಸುತ್ತಿರುವ ಭದ್ರತಾ ಅಪಾಯ ಹಾಗೂ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಧಾನಿ ಮನವಿ ಮಾಡಿದರು.

4ಸಿ ಮಂತ್ರ ಜಪ:

ಪ್ರಸ್ತುತ ಮಾನವೀಯತೆಯ ಸವಾಲುಗಳನ್ನು ಎದುರಿಸಲು ‘4ಸಿ- ಕನ್ವಿಕ್ಷನ್, ಕಮಿಟ್‌ಮೆಂಟ್, ಕೋಆರ್ಡಿನೇಷನ್, ಕೊಲಾಬರೇಷನ್’ ಮಂತ್ರದ ಮೂಲಕ ತಂತ್ರಜ್ಞಾನ ಆಧಾರಿತ ಪರಿಹಾರಗಳ ಜಾಗತಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಧಾನಿ ಮೋದಿ ಕರೆ ನೀಡಿದರು.

ಪ್ರಧಾನಿ ಮೋದಿ ಅವರ ಪ್ರಮುಖ ಸಂದೇಶ:

* ಭಾರತದ ಡಿಜಿಟಲ್ ರೂಪಾಂತರವು ನಾವಿನ್ಯತೆಯ ಮೇಲಿನ ಅಚಲ ನಂಬಿಕೆ, ತ್ವರಿತ ಅನುಷ್ಠಾನದ ಬದ್ಧತೆಯ ಸಂಕೇತವಾಗಿದೆ.

* ದೇಶವು ತಂತ್ರಜ್ಞಾನ ಬಳಕೆ ಮೂಲಕ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸುವ, ಹೆಚ್ಚು ಕಾರ್ಯಕ್ಷಮತೆ, ವೇಗ, ಪಾರದರ್ಶಕತೆಗೆ ಒತ್ತು ನೀಡಿದೆ.

* ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಾಗತಿಕ ಸವಾಲುಗಳ ಸುರಕ್ಷಿತ ಹಾಗೂ ಅಂತರ್ಗತ ಪರಿಹಾರ ನೀಡಲಿದೆ.

* ಸುರಕ್ಷಿತ, ವಿಶ್ವಾಸಾರ್ಹ ಡಿಜಿಟಲ್ ಆರ್ಥಿಕತೆಗಾಗಿ ಜಿ 20 ವೇದಿಕೆಯು ಉನ್ನತ ಮಟ್ಟದ ತತ್ವಗಳ ಮೇಲೆ ಒಮ್ಮತ ಮೂಡಿಸುವುದು ಮುಖ್ಯ.

* ಭಾರತದಲ್ಲಿ ಯಶಸ್ವಿಯಾಗುವ ಡಿಜಿಟಲ್ ಸಂಬಂಧಿತ ವ್ಯವಸ್ಥೆಯು ವಿಶ್ವದ ಎಲ್ಲಿಯಾದರೂ ಸುಲಭವಾಗಿ ಅನ್ವಯಿಸಬಹುದಾಗಿದೆ.

* ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಆರ್ಥಿಕತೆ ಒಳಗೊಳ್ಳುವಿಕೆ ಖಚಿತಪಡಿಸಿಕೊಳ್ಳಲು ಗ್ಲೋಬಲ್ ಪಬ್ಲಿಕ್ ಡಿಜಿಟಲ್ ಗೂಡ್ಸ್ ರೆಪೋಸಿಟರಿ ವೇದಿಕೆ ‘ಇಂಡಿಯಾ ಸ್ಟಾಕ್’ ರಚಿಸುವುದಾಗಿ ಘೋಷಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net