

ಸೊರಬ: ಭಾರತ ದೇಶವು ಆಧ್ಯಾತ್ಮಿಕ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಗುರು ಮತ್ತು ಶಿಷ್ಯರ ಪರಂಪರೆಯಲ್ಲಿ ಗುರುವಿನ ಮಾರ್ಗದರ್ಶನ ಮಹತ್ವ ಪಡೆದಿದೆ ಎಂದು ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಶರಣ ಸಿದ್ಧಾಂತದಲ್ಲಿ ಭಗವಂತನ ಚಿಂತನೆ ದೊಡ್ಡದು ಎಂದರು.
ಒಬ್ಬ ಸಾಧಕ ಇನ್ನೊಬ್ಬರಲ್ಲಿನ ಭಕ್ತಿ ಭಾವವನ್ನು ನೋಡಿ ಲಿಂಗಧಾರಣೆ ಮಾಡುವುದರಿಂದ ಅವರಲ್ಲಿ ಆಧ್ಯಾತ್ಮಿಕ ಚಿಂತನೆ, ಸಂಸ್ಕಾರ ಗುಣಗಳನ್ನು ಬೆಳೆಸುತ್ತದೆ. ಈ ಸಂಸ್ಕಾರಗಳು ಪ್ರತಿಯೊಂದು ಮನ, ಮನೆಗಳಲ್ಲಿ ಬೆಳೆದಾಗ ಧಾರ್ಮಿಕ ಕಾರ್ಯಗಳಿಗೆ ಮಹತ್ವ ಬರುತ್ತದೆ ಎಂದರು.
ವಕೀಲ ಎಂ.ಆರ್.ಪಾಟೀಲ್ ಮಾತನಾಡಿ, ನಮ್ಮ ದೇಶದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಗಳು ಹೆಚ್ಚು ಮಹತ್ವ ಹೊಂದಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಅಧರ್ಮದ ಮಾರ್ಗದಲ್ಲಿ ನಡೆಯುವವರನ್ನು ಸರಿದಾರಿಗೆ ತರಲು ಬಸವಾದಿ ಶಿವಶರಣರ ಅವಿರತವಾಗಿ ಶ್ರಮಿಸಿದ್ದರು. ಧರ್ಮ ಬಾಹಿರವಾಗಿ ನಡೆಯುವವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದುವುದು ಅಗತ್ಯ. ಪ್ರತಿಯೊಬ್ಬರೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಅಕ್ಕನ ಬಳಗ ಭಜನೆ ಕಾರ್ಯಕ್ರಮ ನಡೆಸಿಕೊಟ್ಟಿತು. ರಾಮಣ್ಣ ಭಜಂತ್ರಿ ಶಹನಾಯ್ ನುಡಿಸಿದರು. ಶರಣಪ್ಪ ಕೊಡಕಣಿ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಅಕ್ಕನ ಬಳಗದ ಲತಾ ಮಹೇಶ್, ಪೂರ್ಣಿಮಾ ಶಿವಯೋಗಿ, ಪುಷ್ಪಾ ವಿಶ್ವನಾಥ್, ನಿವೇದಿತಾ, ಸುನೀತಾ, ಉಷಾ, ಪುಷ್ಪಾ ನಾಗರಾಜ್, ಶಿವಲೀಲಾ ಇತರರಿದ್ದರು.