2031ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣ: ಹಣಕಾಸು ಸಚಿವೆ ಸೀತಾರಾಮನ್ ವಿಶ್ವಾಸ

nirmala-2
Published on

ನವದೆಹಲಿ: 2031 ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಶುಕ್ರವಾರ ಜರುಗಿದ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ವ್ಯಾಪಾರ ಶೃಂಗಸಭೆ 2024 ರಲ್ಲಿ ಅವರು ಮಾತನಾಡಿದರು.

ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಗೆ ಭಾರತವು 18% ಕೊಡುಗೆ ನೀಡುತ್ತದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಹಣಕಾಸು ಸಚಿವರಿಂದ ಈ ಹೇಳಿಕೆ ಹೊರಬಂದಿದೆ.

ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ, ಭಾರತದ ಬೆಳವಣಿಗೆಯ ನಿರೂಪಣೆಯ ಬಲವಾದ ಸ್ವರೂಪವನ್ನು ಹಾಗೂ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ಪ್ರಾಮುಖ್ಯವನ್ನು ಅವರು ಎತ್ತಿ ತೋರಿಸಿದರು, ಉತ್ಪನ್ನ ತಯಾರಿಕೆಯಲ್ಲಿ ಅತ್ಯಾಧುನಿಕತೆಯನ್ನು ಸುಧಾರಿಸುವ ಅಗತ್ಯವನ್ನು ಸೂಚಿಸಿದರು. ಸ್ಥಿರವಾದ ಆರ್ಥಿಕ ಬೆಳವಣಿಗೆ ಕಾಪಾಡಿಕೊಳ್ಳಲು ಮತ್ತು ಸ್ವಾವಲಂಬನೆ ಸಾಧಿಸಲು ದೃಢವಾದ ಉತ್ಪಾದನೆಯು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ಉತ್ಪಾದನೆ ಬಲಪಡಿಸುವ ಮೂಲಕ, ಭಾರತವು ದೇಶೀಯ ಬೇಡಿಕೆಯನ್ನು ಉತ್ತಮವಾಗಿ ಪೂರೈಸಬಹುದು ಮತ್ತು ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು, ಇದು ಸ್ವಾವಲಂಬನೆಗಾಗಿ ಸರ್ಕಾರದ ದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂದು ಅವರು ಹೇಳಿದರು.

ಮುಂಬರುವ ಚುನಾವಣೆಗಳಲ್ಲಿ ಪ್ರಬಲ ಬಹುಮತವನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರ ಸಾಮರ್ಥ್ಯದ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು. ಮುಂಬರುವ ಜುಲೈ ಬಜೆಟ್‌ನಲ್ಲಿ ಸಿಐಐನ ಸಲಹೆಗಳನ್ನು ಪರಿಗಣಿಸಲಾಗುವುದು ಎಂದೂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net