

ಸಾಮಾನ್ಯ ನಾಗರಿಕರು, ಯೂಟ್ಯೂಬರ್ಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಎಂಜಿನಿಯರ್ಗಳು, ಸರ್ಕಾರಿ ಅಧಿಕಾರಿಗಳು... ಹೀಗೆ ವಿಭಿನ್ನ ಹಿನ್ನೆಲೆಯುಳ್ಳ ಭಾರತೀಯರು ಇಂದು ಪಾಕಿಸ್ತಾನದ ಗೂಢಚಾರಿಕೆ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಆಪರೇಷನ್ ಸಿಂಧೂರ್ ಬಳಿಕ ಇಂಥ 15ಕ್ಕೂ ಅಧಿಕ ಗೂಢಚಾರರನ್ನು ಬಂಧನ ಮಾಡಲಾಗಿದೆ. ಸಾಮಾನ್ಯ ನಾಗರಿಕರು ಏಕೆ ಪಾಕ್ ಏಜೆಂಟ್ ಆಗುತ್ತಿದ್ದಾರೆ? ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಯಾವ ರೀತಿಯಲ್ಲಿ ಭಾರತದ ನಾಗರಿಕರನ್ನು ಬೇಹುಗಾರಿಕೆ ಬಲೆಗೆ ಬೀಳಿಸುತ್ತಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ 2023ರಲ್ಲಿ ಪಾಕಿಸ್ತಾನದ ಹೈ ಕಮಿಷನ್ಗೆ ವೀಸಾ ಪಡೆಯಲು ಭೇಟಿ ನೀಡಿದಾಗ ಡ್ಯಾನಿಶ್ ಎಂಬ ಐಎಸ್ಐ ಏಜೆಂಟ್ನೊಂದಿಗೆ ಸಂಪರ್ಕಕ್ಕೆ ಬಂದಳು. ಈ ರೀತಿಯ ಸಂಪರ್ಕಗಳು ಸಾಮಾಜಿಕ ಅಥವಾ ವೃತ್ತಿಪರ ಸಂದರ್ಭಗಳಲ್ಲಿ ಆರಂಭವಾಗುತ್ತವೆ. ಇದರಿಂದ ವ್ಯಕ್ತಿಗಳು ಪರಿಸ್ಥಿತಿಯ ಗಂಭೀರತೆ ಅರಿಯದೆ, ಆಮಿಷಕ್ಕೆ ಒಳಗಾಗಿ ಗೂಢಚಾರಿಕೆ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ.
ಐಎಸ್ಐ ವಿಶೇಷ ಆತಿಥ್ಯ, ಉಚಿತ ಪ್ರವಾಸಗಳು, ಆರ್ಥಿಕ ಪ್ರಲೋಭನೆಗಳು, ವೈಯಕ್ತಿಕ ಸಂಬಂಧಗಳ ಮೂಲಕ (ಹನಿ ಟ್ರಾ್ಯಪ್) ಆಕರ್ಷಿಸಲಾತ್ತದೆ. ಯೂಟ್ಯೂಬರ್ ಜ್ಯೋತಿಗೆ ಪಾಕಿಸ್ತಾನದಲ್ಲಿ ವಿಐಪಿ ಸೌಲಭ್ಯ, ವಿಶೇಷ ವೀಸಾ, ಭದ್ರತೆಯನ್ನು ಒದಗಿಸಲಾಯಿತು. ಇದರಿಂದ ಆಕೆಐಎಸ್ಐಗೆ ಹತ್ತಿರವಾಗಿದ್ದಳು.
ಕರ್ತಾರ್ಪುರ ಸಾಹಿಬ್ ಕಾರಿಡಾರ್ನಂತಹ ಧಾರ್ವಿುಕ ಕಾರ್ಯಕ್ರಮಗಳನ್ನು ಐಎಸ್ಐ ತನ್ನ ಗೂಢಚಾರಿಕೆಗೆ ಬಳಸಿಕೊಳ್ಳುತ್ತದೆ. ಯಾತ್ರಿಕರನ್ನು ಗುರಿಯಾಗಿಸಿ, ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ಸೆರೆಹಿಡಿಯಲಾಗುತ್ತದೆ. ನಂತರ ಇದನ್ನು ಬ್ಲಾಕ್ವೆುೕಲ್ಗೆ ಬಳಸಿದ ಉದಾಹರಣೆಯೂ ಇದೆ. ಇಲ್ಲಿ ಆಗಮಿಸುವ ವ್ಯಕ್ತಿಗಳ ಸ್ನೇಹ ಬೆಳೆಸಿ, ಮನವೊಲಿಕೆ ಮಾಡಿ ಅಥವಾ ಆಮಿಷ ಒಡ್ಡಿ ಬಲೆಗೆ ಬೀಳಿಸಲಾಗುತ್ತದೆ.
ಪಾಕಿಸ್ತಾನದ ಐಎಸ್ಐ ಆಧುನಿಕ, ಡಿಜಿಟಲ್ ಯುದ್ಧದ ತಂತ್ರವನ್ನು ಅನುಸರಿಸುತ್ತಿದೆ. ಇದನ್ನು ಹೈಬ್ರೀಡ್ ವಾರ್ಫೇರ್ ಎಂದೂ ಕರೆಯಲಾಗುತ್ತದೆ. ಇದರ ಮುಖ್ಯ ಗುರಿಗಳು ಹೀಗಿವೆ.?ಕಾರ್ಯಸೂಚಿ ಪ್ರಚಾರ: ಸಾಮಾಜಿಕ ಮಾಧ್ಯಮ ಪ್ರಭಾವಿ ಗಳ ಮೂಲಕ ಭಾರತದ ವಿರುದ್ಧ ಕಾರ್ಯಸೂಚಿ ರೂಪಿಸುವುದು. ಸಮಾಜದಲ್ಲಿ ಒಡಕು ಮತ್ತು ಧ್ರುವೀಕರಣ ಉಂಟುಮಾಡುವುದು. ಜ್ಯೋತಿ ಮಲ್ಹೋತ್ರಾ ತನ್ನ ಯುಟ್ಯೂಬ್ ವೀಡಿಯೊಗಳ ಮೂಲಕ ಪಾಕ್ ಬಗ್ಗೆ ಉತ್ತಮ ಅಭಿಪ್ರಾಯ ರೂಪಿಸಲು ಯತ್ನಿಸಿದ್ದಳು.
ಸಂವೇದನಾಶೀಲ ಮಾಹಿತಿ ಸಂಗ್ರಹ: ಪಾಕ್ ಗೂಢಚಾರರು ಭಾರತದ ಸೇನಾ ಚಲನವಲನ, ವಿಮಾನ ನಿಲ್ದಾಣಗಳು, ಇತರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಐಎಸ್ಐಗೆ ಒದಗಿಸುತ್ತಾರೆ. ಆಪರೇಷನ್ ಸಿಂಧೂರ ಸಮಯದಲ್ಲಿ ಬ್ಲಾಕ್ಔಟ್ ಸಹಿತ ಹಲವು ಸೇನಾ ಮಾಹಿತಿಯನ್ನು ಜ್ಯೋತಿಯಿಂದ ಪಾಕ್ ಸಂಗ್ರಹ ಮಾಡಿತ್ತು.
ಜಾಲ ವಿಸ್ತರಣೆ: ಐಎಸ್ಐ ತನ್ನ ಜಾಲವನ್ನು ವಿಸ್ತರಿಸಲು ಸಾಮಾನ್ಯ ನಾಗರಿಕರನ್ನು ಗುರಿಯಾಗಿಸುತ್ತಿದೆ. ಜ್ಯೋತಿ ಸಹಿತ ಹಲವರನ್ನು ಮೊದಲು ಸಾಮಾನ್ಯರಂತೆ ಪರಿಚಯ ಮಾಡಿಕೊಂಡು ನಂತರ ಅವರನ್ನು ಗೂಢಚಾರಿಕೆಗೆ ಬಳಕೆ ಮಾಡಲಾಯಿತು. ಹೀಗೆ ಈ ಜಾಲವನ್ನು ಇನ್ನಷ್ಟು ವಿಸ್ತರಿಸುವುದು ಪಾಕಿಸ್ತಾನದ ಗುರಿಯಾಗಿದೆ.
ರಾಷ್ಟ್ರೀಯ ಭದ್ರತೆಗೆ ಕುತ್ತು: ಆಪರೇಷನ್ ಸಿಂಧೂರ ಸಮಯದಲ್ಲಿ ಬ್ಲಾಕ್ಔಟ್ ವಿವರಗಳಂತಹ ಸಂವೇದನಾಶೀಲ ಮತ್ತು ಸೇನಾ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುವುದು ಭಾರತದ ಸೇನಾ ಕಾರ್ಯಾಚರಣೆಗಳಿಗೆ ಅಪಾಯ ಉಂಟುಮಾಡಬಹುದು.
ಸಾಮಾಜಿಕ ಒಡಕು: ಐಎಸ್ಐ ಕಾರ್ಯಸೂಚಿ ಭಾರತದಲ್ಲಿ ಧಾರ್ವಿುಕ ಮತ್ತು ಸಾಮಾಜಿಕ ಒಡಕನ್ನು ಉಂಟುಮಾಡುವ ಗುರಿಯನ್ನೂ ಹೊಂದಿದೆ. ಜನರ ನಡುವೆ ಭಿನ್ನಾಭಿಪ್ರಾಯವನ್ನು ಬಿತ್ತುವ ಮೂಲಕ ದೇಶದ ಒಗ್ಗಟ್ಟನ್ನು ದುರ್ಬಲಗೊಳಿಸಲಾಗುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ.
ಡಿಜಿಟಲ್ ಯುದ್ಧ: ಸಾಮಾಜಿಕ ಮಾಧ್ಯಮದ ಮೂಲಕ ಗೂಢಚಾರಿಕೆಯು ಆಧುನಿಕ ಯುದ್ಧದ ಒಂದು ರೂಪವಾಗಿದೆ. ಇದು ಸಾಂಪ್ರದಾಯಿಕ ಯುದ್ಧಕ್ಕಿಂತ ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತದೆ. ಇದನ್ನು ತಡೆಗಟ್ಟುವುದು ಭಾರತದ ಭದ್ರತಾ ಸಂಸ್ಥೆಗಳಿಗೆ ಸವಾಲಾಗಿದೆ.