

ನವದೆಹಲಿ: ದೇಶಾದ್ಯಂತ ಸದ್ಯ ಚೀನಾ ವಿರೋಧ ಮನೋಭಾವ ದಟ್ಟವಾಗಿದೆ. ಅದರಲ್ಲೂ ವಿಶೇಷವಾಗಿ ಜಗತ್ತನ್ನೇ ಬಾಧಿಸುತ್ತಿರುವ ಕರೊನಾ ವೈರಾಣುವಿನ ಉಗಮ ಸ್ಥಾನ ಚೀನಾ ಎಂಬುದರಿಂದ ಹಿಡಿದು ಲಡಾಖ್ ಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿನವರೆಗೆ ಇದಕ್ಕೆ ಕಾರಣವಾಗಿದೆ. ಆದರೆ, ಸುಲಭ ದರದಲ್ಲಿ ಸಿಗುವ ತನ್ನ ಉತ್ಪನ್ನಗಳು ಹಾಗೂ ಆ್ಯಪ್ಗಳನ್ನು ಬಿಟ್ಟು ಬದಕಲು ಭಾರತೀಯರಿಗೆ ಸಾಧ್ಯವೇ ಇಲ್ಲ ಎಂದು ಚೀನಾ ಹೇಳಿಕೊಂಡಿದೆ.
ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ನಲ್ಲಿ ಈ ಬಗ್ಗೆ ವರದಿಯಾಗಿದ್ದು, ಚೀನಾ ನಿರ್ಮಿತ ಸ್ಮಾರ್ಟ್ಫೋನ್ಗಳು ಮತ್ತು ಮೊಬೈಲ್ ಆ್ಯಪ್ಗಳನ್ನು ಬಹಿಷ್ಕರಿಸುವ ಹಿಂದೆ ಭಾರತೀಯ ರಾಷ್ಟ್ರೀಯವಾದಿಗಳ ಕೈವಾಡವಿದೆ. ಚೀನಾದ ಹೆಸರಿಗೆ ಮಸಿ ಬಳಿಯುವ ಜತೆಗೆ ಕಳಂಕ ತರುವ ಹುನ್ನಾರ ಅವರದ್ದಾಗಿದೆ ಎಂದು ಆರೋಪಿಸಲಾಗಿದೆ.
ಭಾರತದಲ್ಲಿ ಸದ್ಯ ಚಾಲ್ತಿಯಲ್ಲಿರುವ ಬೈಕಾಟ್ ಚೀನಾ (ಚೀನಾವನ್ನು ಬಹಿಷ್ಕರಿಸಿ) ಅಭಿಯಾನ ಖಂಡಿವಾಗಿಯೂ ವಿಫಲವಾಗುತ್ತದೆ. ಚೀನಾ ಉತ್ಪನ್ನಗಳ ಬಗೆಗಿನ ಭಾರತೀಯ ಆಕರ್ಷಣೆ ಮತ್ತು ಪ್ರೀತಿ, ಸೆಳತವನ್ನು ಕಡಿಮೆ ಮಾಡುವುದು ಅಸಾಧ್ಯದ ಮಾತು ಎಂದು ತಿಳಿಸಲಾಗಿದೆ.