

Indian student : ಅಮೆರಿಕದ ಮಿಲ್ವಾಕೀಯಲ್ಲಿರುವ ಅಂಗಡಿಯೊಂದರ ಮೇಲೆ ಬುಧವಾರ (ಮಾರ್ಚ್ 05) ಮುಂಜಾನೆ ಸುಲಿಗೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ 27 ವರ್ಷದ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಗಂಪಾ ಪ್ರವೀಣ್ ಎಂದು ಗುರುತಿಸಲಾಗಿದೆ. ಈತ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಕ್ಕೆ ಹೋಗಿದ್ದರು. ಅಧ್ಯಯನದ ನಡುವೆ ಮಿಲ್ವಾಕೀಯಲ್ಲಿರುವ ಅಂಗಡಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಪ್ರವೀಣ್ ಎರಡನೇ ವರ್ಷದ ಎಂಎಸ್ ಓದುತ್ತಿದ್ದರು.
ನಿನ್ನೆ ಬೆಳಗ್ಗೆ 5 ಗಂಟೆಗೆ ತನ್ನ ಮಗನಿಂದ ವಾಟ್ಸ್ಆ್ಯಪ್ ಕರೆ ಬಂದಿತು. ಆದರೆ, ನನ್ನಿಂದ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾ ಮೃತ ಪ್ರವೀಣ್ ಅವರ ತಂದೆ ರಾಘವುಲು ಕಣ್ಣೀರು ಹಾಕಿದ್ದಾರೆ.
ಬೆಳಗ್ಗೆ ಎದ್ದ ನಂತರ, ನಾನು ಮಿಸ್ಡ್ ಕಾಲ್ ನೋಡಿದೆ. ಇದರ ಬೆನ್ನಲ್ಲೇ ನಾನು ಅವನಿಗೆ ವಾಯ್ಸ್ ಮೆಸೇಜ್ ಕಳುಹಿಸಿದೆ. ಆದರೆ, ಒಂದು ಗಂಟೆಯ ನಂತರವೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ನಾನು ಆತನ ನಂಬರ್ಗೆ ಕರೆ ಮಾಡಿದೆ, ಆದರೆ ಬೇರೊಬ್ಬರು ಕರೆ ಸ್ವೀಕರಿಸಿದರು. ನನಗೆ ಅನುಮಾನ ಬಂದು ಏನಾದರೂ ಸಂಭವಿಸಿದೆಯೇ ಎಂದು ಯೋಚಿಸುತ್ತಾ ಕರೆಯನ್ನು ಕೊನೆಗೊಳಿಸಿದೆ ಎಂದು ರಾಘವುಲು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಾನು ಅವನ ಸ್ನೇಹಿತರನ್ನು ಸಂಪರ್ಕಿಸಿದಾಗ, ಅಂಗಡಿ ಒಂದರಲ್ಲಿ ಪ್ರವೀಣ್ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿದ್ದನ್ನು ತಿಳಿಸಿದರು. ಅಲ್ಲದೆ, ಅಂಗಡಿಯ ದರೋಡೆಯ ಸಮಯದಲ್ಲಿ, ದರೋಡೆಕೋರರು ಹಾರಿಸಿದ ಗುಂಡು ಅವನಿಗೆ ತಗುಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಗೊತ್ತಾಯಿತು. ಇದರಿಂದ ನಾನು ಒಂದು ಕ್ಷಣ ಕುಸಿದುಬಿದ್ದೆ ಎಂದು ರಾಘವುಲು ಹೇಳಿದ್ದಾರೆ. (ಏಜೆನ್ಸೀಸ್)