ಅಮೆರಿಕಾದಲ್ಲಿ ಬಂಕ್​ನಲ್ಲಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ| Murder

Untitled design - 2025-10-05T193305.170
Published on

Murder: ಅಮೆರಿಕದ ಟೆಕ್ಸಾಸ್‌ನಲ್ಲಿ ಅ. 03ರಂದು ಅಪರಿಚಿತ ದುಷ್ಕರ್ಮಿಯೊಬ್ಬ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ. ಘಟನೆಯನ್ನು ಪೊಲೀಸರು ದರೋಡೆ ಯತ್ನ ಎಂದು ಶಂಕಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ಭಾನುವಾರ(ಅ. 05) ವರದಿಯಾಗಿದೆ.

ತೆಲಂಗಾಣದ 28 ವರ್ಷದ ಪೋಲ್ ಚಂದ್ರಶೇಖರ್ ಕೊಲೆಯಾದ ವಿದ್ಯಾರ್ಥಿ. ಹೈದರಾಬಾದ್‌ನಲ್ಲಿ ದಂತ ಶಸ್ತ್ರಚಿಕಿತ್ಸೆಯ ಪದವಿ (ಬಿಡಿಎಸ್) ಪೂರ್ಣಗೊಳಿಸಿದ್ದ ಚಂದ್ರಶೇಖರ್, 2023ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಡೇಟಾ ಅನಾಲಿಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ಹೋಗಿದ್ದನು. ಇತ್ತೀಚೆಗೆ ತನ್ನ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದನು. ದೈನಂದಿನ ಖರ್ಚುಗಳನ್ನು ಪೂರೈಸಲು ಪೆಟ್ರೋಲ್ ಬಂಕ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಮೃತನ ಸಹೋದರ ದಾಮೋದರ್, ಅವನು ಉನ್ನತ ವ್ಯಾಸಂಗ ಮಾಡಲು ಅಲ್ಲಿಗೆ ಹೋಗಿದ್ದನು. ಓದು ಮುಗಿದ ಬಳಿಕ ಅಲ್ಲಿಯೇ ಉದ್ಯೋಗವನ್ನು ಹುಡುಕುತ್ತಿದ್ದನು. ಕಳೆದ ಆರು ತಿಂಗಳಿನಿಂದ ಅವನು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದನು ಎಂದು ಹೇಳಿದ್ದಾರೆ.

ಘಟನೆ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ವಿದ್ಯಾರ್ಥಿ ಸಾವಿಗೆ ಸಂತಾಪ ಸೂಚಿಸಿದ್ದು, ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಲ್.ಬಿ. ನಗರದ ವಿದ್ಯಾರ್ಥಿ ಚಂದ್ರಶೇಖರ್ ಅವರ ದುರಂತ ಸಾವು ಅತ್ಯಂತ ದುಃಖಕರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಕುಟುಂಬಕ್ಕೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಸರ್ಕಾರವು ಚಂದ್ರಶೇಖರ್ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಪಾರ್ಥೀವ ಶರೀರವನ್ನು ಮನೆಗೆ ತರಲು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net