

ನವದೆಹಲಿ: ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ವಿುಸುವಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಬಾಹ್ಯಾಕಾಶ ದಿನವಾದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಸ್ಪೇಸ್ ಮಿಷನ್ನ ಯಶಸ್ಸನ್ನು ಪ್ರಸ್ತಾಪಿಸಿದ ಮೋದಿ, ದೇಶ ಸದ್ಯದಲ್ಲೇ ಗಗನಯಾತ್ರಿಗಳ ಸಮೂಹ ರಚಿಸಲಿದ್ದು, ಯುವಜನತೆ ಅದಕ್ಕೆ ಸೇರಬೇಕು ಎಂದು ಕರೆ ನೀಡಿದರು. ಭಾರತ ಇಂದು ಸೆಮಿ ಕ್ರಯೊಜೆನಿಕ್ ಇಂಜಿನ್ಗಳು ಹಾಗೂ ಎಲೆಕ್ಟ್ರಿಕ್ ಪ್ರೊಪಲ್ಷನ್ ಮುಂತಾದ ಅದ್ಭುತ ತಂತ್ರಜ್ಞಾನಗಳೊಂದಿಗೆ ಮುಂದುವರಿಯುತ್ತಿದೆ. ವಿಜ್ಞಾನಿಗಳ ಕಠಿಣ ಪರಿಶ್ರಮದಿಂದಾಗಿ ಭಾರತ ಗಗನಯಾನದೊಂದಿಗೆ ಮೇಲೇರಲಿದ್ದು, ಶೀಘ್ರವೇ ಭಾರತ ತನ್ನದೇ ಆದ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸಲಿದೆ ಎಂದು ಮೋದಿ ವಿವರಿಸಿದರು.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ನಾನು ಮೂರು ದಿನಗಳ ಹಿಂದೆ ಭೇಟಿಯಾಗಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸುವ ಮೂಲಕ ಅವರು ಪ್ರತಿ ಭಾರತೀಯನಲ್ಲೂ ಹೆಮ್ಮೆ ಮೂಡಿಸಿದ್ದಾರೆ. ಆ ಧ್ವಜವನ್ನು ಅವರು ನನಗೆ ತೋರಿಸಿದ ಆ ಕ್ಷಣದ ಅನುಭವ ಪದಗಳಿಗೆ ನಿಲುಕದ್ದು ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಶುಕ್ಲಾ ಗಗನಯಾನಕ್ಕೆ ಕೊಂಡೊಯ್ದಿದ್ದ ರಾಷ್ಟ್ರಧ್ವಜವನ್ನು ಇತ್ತೀಚೆಗೆ ಪ್ರಧಾನಿಯವರನ್ನು ಭೇಟಿ ಮಾಡಿದ್ದಾಗ ಹಸ್ತಾಂತರಿಸಿದ್ದರು. ನವ ಭಾರತದ ಯುವಜನತೆಯ ಅಪಾರ ಕನಸು ಹಾಗೂ ಅಗಾಧ ಧೈರ್ಯವನ್ನು ನಾನು ಶುಕ್ಲಾ ಜತೆ ಮಾತುಕತೆ ನಡೆಸುತ್ತಿದ್ದಾಗ ಕಂಡೆ. ಈ ಕನಸನ್ನು ನನಸಾಗಿಸಿಕೊಳ್ಳುವ ಸಲುವಾಗಿ ನಾವು ಗಗನಯಾತ್ರಿಗಳ ಸಮೂಹ ರಚಿಸಲು ಸಜ್ಜಾಗುತ್ತಿದ್ದೇವೆ. ನನ್ನ ಯುವಸ್ನೇಹಿತರು ಇದರೊಂದಿಗೆ ಕೈಜೋಡಿಸಿ ಭಾರತದ ಕನಸುಗಳಿಗೆ ರೆಕ್ಕೆ ನೀಡಬೇಕು ಎಂದು ರಾಷ್ಟ್ರೀಯ ಬಾಹ್ಯಾಕಾಶ ದಿನವಾದ ಇಂದು ಆಹ್ವಾನಿಸುತ್ತಿದ್ದೇನೆ ಎಂದೂ ಮೋದಿ ಹೇಳಿದರು.
ನವದೆಹಲಿ: ಚಂದ್ರಯಾನ-4 ಮಿಷನ್ ಮೂಲಕ 2040ರಲ್ಲಿ ಚಂದ್ರನ ಮೇಲೆ ಲ್ಯಾಂಡಿಂಗ್ ಹಾಗೂ 2035ರಲ್ಲಿ ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ವಣವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ. ಶನಿವಾರ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಈ ವಿಷಯ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಹೋಗಿ ಬಂದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಸಾಧನೆಯನ್ನು ಉಲ್ಲೇಖಿಸಿದ ಅವರು, ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಸವಾಲನ್ನು ಭಾರತ ನಿಭಾಯಿಸಿದೆ, ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಪ್ರಧಾನಿಯವರ ದೃಷ್ಟಿಕೋನ ಹಾಗೂ ನಿರ್ದೇಶನದಂತೆ ನಾವು ಚಂದ್ರಯಾನ-4ರ ಮಿಷನ್ಗೆ ಸಜ್ಜಾಗುತ್ತಿದ್ದು, ಅದಕ್ಕಾಗಿ ವೀನಸ್ ಆರ್ಬಿಟರ್ ಮಿಷನ್ ಹೊಂದಲಿದ್ದೇವೆ. ಅಲ್ಲದೆ ಭಾರತೀಯ ಅಂತರಿಕ್ಷ ನಿಲ್ದಾಣ(ಬಿಎಎಸ್) ಎನ್ನುವ ದೇಶದ್ದೇ ಆದ ಅಂತರಿಕ್ಷ ನಿಲ್ದಾಣವನ್ನು 2035ರಲ್ಲಿ ಹೊಂದಲಿದ್ದು, ಅದರ ಮೊದಲ ಮಾಡ್ಯೂಲ್ 2028ರಲ್ಲಿ ಎತ್ತಲಿದ್ದೇವೆ ಎಂದು ನಾರಾಯಣನ್ ತಿಳಿಸಿದ್ದಾರೆ. ನೆಕ್ಸ್ಟ್ ಜನರೇಷನ್ ಲಾಂಚರ್(ಎನ್ಜಿಎಲ್)ಗೆ ಪ್ರಧಾನಮಂತ್ರಿಯವರು ಅನುಮೋದನೆ ನೀಡಿದ್ದು, 2040ರಲ್ಲಿ ನಾವು ಚಂದ್ರನ ಮೇಲೆ ಇಳಿಯಲಿದ್ದು, ಯಶಸ್ವಿಯಾಗಿ ವಾಪಸ್ ಬರಲಿದ್ದೇವೆ. 2040ರ ಸುಮಾರಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ವಿಶ್ವದ ಯಾವುದೇ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಮನಾಗಿರಲಿವೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಭಾರತ ಸ್ವಾವಲಂಬಿ ಆಗಬೇಕಾದ ಹಲವಾರು ಕ್ಷೇತ್ರಗಳ ಬಗ್ಗೆ ನಾನು ಆ.15ರಂದು ಪ್ರಸ್ತಾಪಿಸಿದ್ದು, ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಪಾತ್ರವನ್ನು ಬಲಪಡಿಸಬೇಕೆಂದು ಪ್ರಧಾನಿ ಒತ್ತಾಯಿಸಿದರು. ಮುಂದಿನ ಐದು ವರ್ಷಗಳಲ್ಲಿ ನಾವು ಬಾಹ್ಯಾಕಾಶ ವಲಯದಲ್ಲಿ ಐದು ಯುನಿಕಾರ್ನ್ಗಳನ್ನು ರಚಿಸಬಹುದು. ಪ್ರಸ್ತುತ ಭಾರತ ತನ್ನ ನೆಲದಿಂದ ವಾರ್ಷಿಕವಾಗಿ ಸುಮಾರು 5ರಿಂದ 6 ಪ್ರಮುಖ ಉಡಾವಣೆಗಳನ್ನು ನಡೆಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ನಾವು ಒಂದು ವರ್ಷದಲ್ಲಿ 50 ರಾಕೆಟ್ ಉಡಾವಣೆಗಳನ್ನು ನೋಡಲು ಸಾಧ್ಯವಾಗುವಂತೆ ಖಾಸಗಿ ವಲಯ ಮುಂದೆ ಹೆಜ್ಜೆ ಹಾಕಬೇಕೆಂದು ಬಯಸುತ್ತೇನೆ ಎಂದು ಮೋದಿ ಕರೆ ನೀಡಿದರು. ಅನಂತ ವಿಶ್ವದಲ್ಲಿ ಯಾವುದೇ ಗಡಿಯೂ ಅಂತಿಮಗಡಿಯಲ್ಲ, ಬಾಹ್ಯಾಕಾಶದಲ್ಲಿ ಕೂಡ ಯಾವುದೇ ಗಡಿ ಇಲ್ಲ. ನಾವು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ತಲುಪಿದ್ದೇವೆ, ನಾವು ಬಾಹ್ಯಾಕಾಶದಲ್ಲಿ ಇನ್ನೂ ಆಳಕ್ಕೆ ಇಣುಕಿ ನೋಡಬೇಕಾಗಿದೆ ಎಂದು ಮೋದಿ ಹೇಳಿದರು.