

ನವದೆಹಲಿ: ಮಹಾಮಾರಿ ಕರೊನಾ ನಂತರ ಖಾಸಗಿ ವಲಯದಲ್ಲಿ ಸಾಲು ಸಾಲು ಉದ್ಯೋಗ ಕಡಿತ ಪ್ರಭಾವವನ್ನು ಎಲ್ಲ ರಾಷ್ಟ್ರಗಳು ಎದುರಿಸುತ್ತಿವೆ. ಇದನ್ನು ನೋಡಿ ಸರ್ಕಾರಿ ಕೆಲಸವೇ ಉತ್ತಮ, ಸರ್ಕಾರಿ ಉದ್ಯೋಗದಲ್ಲಿ ಯಾವುದೇ ಅಭದ್ರತೆ ಕಾಡುವುದಿಲ್ಲ ಅಂತಾ ನೀವು ಅಂದುಕೊಂಡಿದ್ದರೆ ಈ ಸುದ್ದಿಯು ಅದನ್ನು ಸುಳ್ಳು ಮಾಡಲಿದೆ.
ಹೌದು, 2021ರ ಜುಲೈ 21ರಿಂದ ಈಚೆಗೆ ಭಾರತೀಯ ರೈಲ್ವೆ ಇಲಾಖೆ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಕಳೆದ 16 ತಿಂಗಳಲ್ಲಿ ಪ್ರತಿ ಮೂರು ದಿನಕ್ಕೆ ಓರ್ವ ಉದ್ಯೋಗಿಯನ್ನು ರೈಲ್ವೆ ಇಲಾಖೆ ಕೆಲಸದಿಂದ ತೆಗೆದಿದೆ. ಪ್ರಮುಖವಾಗಿ ಸರಿಯಾಗಿ ಕೆಲಸ ನಿರ್ವಹಿಸದ ಅಥವಾ ಭ್ರಷ್ಟ ಉದ್ಯೋಗಿಗಳನ್ನು ಗುರಿಯಾಗಿರಿಸಿ, ಕೆಲಸದಿಂದ ತೆಗೆದು ಹಾಕಲಾಗಿದೆ.
ಇದುವರೆಗೂ 139 ಸಿಬ್ಬಂದಿಯನ್ನು ಸ್ವಯಂ ನಿವೃತ್ತಿಗೆ ಸ್ವೀಕರಿಸಲು ಒತ್ತಾಯಿಸಿದ್ದರೆ, 38 ಸಿಬ್ಬಂದಿಯಿಂದ ಕೆಲಸದಿಂದ ಕಿತ್ತು ಹಾಕಲಾಗಿದೆ. ಮೂಲಗಳ ಪ್ರಕಾರ ಇಬ್ಬರು ಹಿರಿಯ ಮಟ್ಟದ ಅಧಿಕಾರಿಗಳನ್ನು ಬುಧವಾರ ವಜಾ ಮಾಡಲಾಗಿದೆ. ಅದರಲ್ಲಿ ಓರ್ವ ಅಧಿಕಾರಿಯನ್ನು ಹೈದರಾಬಾದ್ನಲ್ಲಿ 5 ಲಕ್ಷ ರೂ. ಲಂಚದ ಹಣದೊಂದಿಗೆ ಬಂಧಿಸಿದರೆ, ಮತ್ತೊಬ್ಬನನ್ನು 3 ಲಕ್ಷ ರೂ. ಲಂಚದ ಹಣದೊಂದಿಗೆ ರಾಂಚಿಯಲ್ಲಿ ಸಿಬಿಐ ಬಂಧಿಸಿದೆ.
ಉದ್ಯೋಗಿಗಳಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಖಡಕ್ ಸಂದೇಶ ರವಾನಿಸಿದ್ದು, "ಕಾರ್ಯನಿರ್ವಹಣೆ ಅಥವಾ ನಾಶವಾಗು" ಎಂಬ ಎರಡು ಅಂಶವನ್ನು ಉಲ್ಲೇಖಿಸಿದ್ದಾರೆ. ಕಾರ್ಯನಿರ್ವಹಣೆ ಅಂದರೆ, ಚೆನ್ನಾಗಿ ಕೆಲಸ ಮಾಡುವುದು ಎಂದರ್ಥ. ಹಾಗೆಯೇ ನಾಶವಾಗು ಎಂಬುದು ಕೆಲಸ ಕಳೆದುಕೊಳ್ಳುವುದನ್ನು ಸೂಚಿಸುತ್ತದೆ. ಜುಲೈ 2021 ರಿಂದ ನಾವು ಪ್ರತಿ ಮೂರು ದಿನಗಳಿಗೊಮ್ಮೆ ರೈಲ್ವೆ ಇಲಾಖೆಯಿಂದ ಒಬ್ಬ ಭ್ರಷ್ಟ ಅಧಿಕಾರಿಯನ್ನು ತೆಗೆದುಹಾಕಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಸಿಬ್ಬಂದಿ ಮತ್ತು ತರಬೇತಿ ಸೇವಾ ನಿಯಮಾವಳಿಗಳ ನಿಯಮ 56 (ಜೆ) ಯನ್ನು ರೈಲ್ವೆ ಇಲಾಖೆ ಇಲ್ಲಿ ನೆನಪಿಸುತ್ತಿದೆ. ಇದರ ಪ್ರಕಾರ ಸರ್ಕಾರಿ ನೌಕರ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಆತನನ್ನು ನಿವೃತ್ತಿಗೆ ಒತ್ತಾಯಿಸಬಹುದು ಅಥವಾ ಕನಿಷ್ಠ ಮೂರು ತಿಂಗಳ ನೋಟಿಸ್ ಅಥವಾ ಆ ಅವಧಿಗೆ ಪರಿಹಾರವನ್ನು ನೀಡಿದ ನಂತರ ಆತನನ್ನು ಕೆಲಸದಿಂದ ವಜಾಗೊಳಿಸಬಹುದು. .
ಈ ನಿಯಾಮಾವಳಿಯನ್ನು ಮುಂದಿಟ್ಟುಕೊಂಡು ಸರಿಯಾಗಿ ಕೆಲಸ ನಿರ್ವಹಣೆ ಮಾಡದ ಉದ್ಯೋಗಿಗಳನ್ನು ಕೇಂದ್ರ ಸರ್ಕಾರಿ ಎಲಿಮಿನೇಟ್ ಮಾಡುತ್ತಿದೆ. 2021 ರ ಜುಲೈ ತಿಂಗಳಲ್ಲಿ ರೈಲ್ವೆ ಸಚಿವರಾಗಿ ನೇಮಕಗೊಂಡ ನಂತರ ಅಶ್ವಿನಿ ವೈಷ್ಣವ್ ಅವರು ಒಂದು ಖಡಕ್ ಹೇಳಿಕೆಯನ್ನು ನೀಡಿದ್ದು, ಕೆಲಸ ಮಾಡದಿದ್ದರೆ ವಿಆರ್‌ಎಸ್ (ಸ್ವಯಂ ನಿವೃತ್ತಿ) ತೆಗೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳಿ ಎಂದಿದ್ದಾರೆ.
ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಅಡಿಯಲ್ಲಿ ಉದ್ಯೋಗಿಗೆ ಎರಡು ತಿಂಗಳ ವೇತನಕ್ಕೆ ಸಮಾನವಾದ ವೇತನವನ್ನು ಸೇವೆಯ ಉಳಿದ ಪ್ರತಿ ವರ್ಷಕ್ಕೆ ನೀಡಲಾಗುತ್ತದೆ. ಆದರೆ, ಕಡ್ಡಾಯ ನಿವೃತ್ತಿಗೆ ಹೋಲಿಸಬಹುದಾದ ಸವಲತ್ತುಗಳನ್ನು ನೀಡುವುದಿಲ್ಲ. (ಏಜೆನ್ಸೀಸ್)