

ಅಮೆರಿಕದಲ್ಲಿದ್ದ ಭಾರತೀಯ ಮೂಲದ ಸಂಶೋಧಕಿ ಬೆಳಗ್ಗೆ ಜಾಗಿಂಗ್ಗೆ ಹೋದಾಗ ಹತ್ಯೆಗೀಡಾಗಿದ್ದಾರೆ. ದಲ್ಲಾಸ್ ಸಮೀಪದಲ್ಲಿರುವ ಪ್ಲಾನೋದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಸಂಶೋಧಕಿಯ ಹೆಸರು ಸರ್ಮಿಸ್ತಾ ಸೇನ್ (43). ಇವರು ಟೆಕ್ಸಾಸ್ನಲ್ಲಿರುವ ಪ್ಲಾನೋದಲ್ಲಿ ವಾಸವಾಗಿದ್ದರು. ಆಗಸ್ಟ್ 1 ರಂದು ಬೆಳಗ್ಗೆ ಜಾಗಿಂಗ್ಗೆ ಹೋದಾಗ ಚಿಶೋಲ್ಮ್ ಟ್ರೈಯಲ್ ಪಾರ್ಕ್ ಬಳಿ ದುಷ್ಕರ್ಮಿಗಳು ದಾಳಿ ನಡೆಸಿ, ಹತ್ಯೆಗೈದಿದ್ದಾರೆ. ಆಕೆಯ ಮೃತದೇಹ ಲೀಗಸಿ ಡ್ರೈವ್ ಮತ್ತು ಮಾರ್ಚ್ ಮ್ಯಾನ್ ವೇ ಸಮೀಪದ ಒಂದು ಸ್ಥಳದಲ್ಲಿ ಬಿದ್ದಿರುವುದನ್ನು ನೋಡಿದ ದಾರಿಹೋಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿಯಾಗಿದೆ.
ಸೇನ್ ಅವರು ಫಾರ್ಮಾಸಿಸ್ಟ್ ಮತ್ತು ಸಂಶೋಧಕಿ. ಅಣ್ವಿಕ ಜೀವಶಾಸ್ತ್ರ ಅಧ್ಯಯನ ನಡೆಸುತ್ತಿದ್ದರು ಹಾಗೂ ಕ್ಯಾನ್ಸರ್ ರೋಗಿಗಳ ಬಗ್ಗೆ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಂಡವರಾಗಿದ್ದರು.
ಇವರು ಜಾರ್ಖಂಡದ ಸಿಂದ್ರಿಯ ಮೂಲದವರಾಗಿದ್ದು, ಅರಿಂದಮ್ ರಾಯ್ ಅವರನ್ನು ಮದುವೆಯಾದ ಬಳಿಕ ಟೆಕ್ಸಾಸ್ನ ಪ್ಲಾನೋಕ್ಕೆ ತೆರಳಿ, ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಹಾಗೇ ಇಬ್ಬರು ಪುತ್ರರೂ ಇದ್ದಾರೆ. ಇದನ್ನೂ ಓದಿ: ನೆನಪಿನಶಕ್ತಿ ಕಳೆದುಕೊಂಡಿರುವ 75 ವರ್ಷದ ವೃದ್ಧೆ ಮೇಲೆ ಅಪರಿಚಿತನಿಂದ ಅತ್ಯಾಚಾರ
ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬನನ್ನು ಈಗಾಗಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಆದರೆ ಈತನೇ ಹತ್ಯೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯ ಕುಟುಂಬ ಹೇಳುವ ಪ್ರಕಾರ, ಸರ್ಮಿಸ್ತಾ ಸೇನ್ ಅವರು ಪ್ರತಿದಿನ ಚಿಶೋಲ್ಮ್ ಟ್ರಯಲ್ ಪಾರ್ಕ್ ಬಳಿ ಜಾಗಿಂಗ್ಗೆ ಹೋಗುತ್ತಿದ್ದರು. ಹಾಗೇ ಆಗಸ್ಟ್ 1ರಂದೂ ಹೋದವರು, ಮತ್ತೆ ವಾಪಸ್ ಬರಲಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಈಕೆಯ ಸಹೋದರನೋರ್ವ ಕ್ಯಾಲಿಫೋರ್ನಿಯಾದಲ್ಲಿ ವೈದ್ಯರಾಗಿದ್ದಾರೆ. (ಏಜೆನ್ಸೀಸ್)