

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ದುಬೈನ ಉಮ್ ಅಲ್ ಕ್ವೈನ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತನ್ನ ಪತ್ನಿಯನ್ನು ರಕ್ಷಿಸಲು ಹೋಗಿ 32 ವರ್ಷದ ಭಾರತೀಯ ಗಂಭೀರವಾದ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಅನಿಲ್ ನಿನಾನ್ ಶೇ. 90 ರಷ್ಟು ಸುಟ್ಟ ಗಾಯಗಳಿಂದ ಜೀವಂತವಾಗಿ ಉಳಿದುಕೊಂಡಿದ್ದು, ಅಬುದಾಬಿಯಲ್ಲಿರುವ ಮಾಫ್ರಖ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಅನಿಲ್ ಆಪ್ತ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅನಿಲ್ ಸ್ಥಿತಿ ತುಂಬಾ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದು, ನಾವೆಲ್ಲರೂ ಆತನಿಗಾಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ಅನಿಲ್ ಪತ್ನಿ ನೀನು ಕೂಡ ಅದೇ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಕೇವಲ 10 ರಷ್ಟು ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ದಂಪತಿಗೆ 4 ವರ್ಷದ ಮಗನಿದ್ದಾನೆ ಎಂದು ಆಸ್ಪತ್ರೆಯಲ್ಲಿರುವ ಅನಿಲ್ ಸಂಬಂಧಿ ಹೇಳಿದ್ದಾರೆ.
ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದ್ದು, ಅಪಾರ್ಟ್ಮೆಂಟ್ ಕಾರಿಡಾರ್ನಲ್ಲಿ ಇಡಲಾಗಿದ್ದ ವಿದ್ಯುತ್ ಬಾಕ್ಸ್ನಲ್ಲಿನ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಮಂಗಳವಾರ ರಾತ್ರಿಯೇ ದಂಪತಿಯನ್ನು ಉಮ್ ಅಲ್ ಕ್ವೈನ್ನಲ್ಲಿರುವ ಶೇಕ್ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಅಬುದಾಬಿಯಲ್ಲಿರುವ ಮಾಫ್ರಖ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ, ಕಾರಿಡರ್ನಲ್ಲಿ ಇರುವಾಗ ಮೊದಲು ನೀನುಗೆ ಬೆಂಕಿ ತಗುಲಿತು. ನೋವಿನಿಂದ ಕೂಗಾಡಿದಾಗ ಆಕೆಯನ್ನು ಉಳಿಸಲು ಅನಿಲ್ ಬೆಡ್ ರೂಮ್ನಿಂದ ಓಡಿ ಬಂದು ಯತ್ನಿಸಿದ, ಆದರೆ ಆತನಿಗು ಬೆಂಕಿ ತಗುಲಿತು ಎಂದು ದಂಪತಿಗಳ ಬಗ್ಗೆ ಒಂದು ವರ್ಷಕ್ಕಿಂತಲೂ ಹೆಚ್ಚು ತಿಳಿದಿರುವ ಸ್ಥಳೀಯ ನಿವಾಸಿ ವಿಕಾರ್ ಮಾಹಿತಿ ನೀಡಿದರು. (ಏಜೆನ್ಸೀಸ್)