

ಶಿವಮೊಗ್ಗ: ಭಾರತೀಯ ಜ್ಞಾನ ಪರಂಪರೆ ಏಕಮುಖಿಯಲ್ಲ, ಇದು ಬಹುಸಂಸ್ಕೃತಿಗಳ ಸಮಗ್ರ ಸ್ವರೂಪ. ದೇಶದ ವಿವಿಧ ಸಂಸ್ಕೃತಿಗಳ ಅನುಸಂಧಾನ ಸಮಾಜದಲ್ಲಿ ಜ್ಞಾನದ ಸಂಕೀರ್ಣ ಪರಂಪರೆ ಸೃಷ್ಟಿಸಿದ್ದು, ಅದನ್ನು ಸೀಮಿತ ಅರ್ಥದಲ್ಲಿ ಪ್ರತಿಪಾದಿಸುವುದು ಸರಿಯಲ್ಲ ಎಂದು ಚಿಂತಕ ಜಿ.ಎನ್.ದೇವಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಗುರುವಾರ ಕುವೆಂಪು ವಿಶ್ವವಿದ್ಯಾಲಯ ಮತ್ತು ಚೆನ್ನೈನ ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ ಆಶ್ರಯದಲ್ಲಿ ಮೂರು ದಿನಗಳ ಸಮಾಜದಲ್ಲಿ ಜ್ಞಾನ ಸಂವಾದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಮೌಖಿಕ ಪರಂಪರೆಯ ಬಹುದೊಡ್ಡ ಇತಿಹಾಸವಿದೆ. ದೇಶದಲ್ಲಿರುವ ಐದು ಸಾವಿರ ಸಮುದಾಯಗಳಿಗೂ ತಮ್ಮದೇ ಆದ ಸ್ಮತಿ ಸಂಪ್ರದಾಯಗಳಿವೆ. ಇದು ಭಾರತೀಯ ಪರಂಪರೆಗೆ ವೈವಿಧ್ಯ ಸ್ವರೂಪ ನೀಡಿದೆ. ಇವುಗಳನ್ನು ಮುಖ್ಯವಾಹಿನಿಯ ಪ್ರಭಾವಿ ಸಂಸ್ಕೃತಿ ಹೆಸರಿನಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ ಎಂದು ತಿಳಿಸಿದರು.
ಜ್ಞಾನಕ್ಕೆ ಮಡಿವಂತಿಕೆಯಾಗಲೀ, ದೇಶಭಾಷೆಗಳ ಮಿತಿಗಳಾಗಲಿ ಇರಬಾರದು. ನಮ್ಮ ಜ್ಞಾನ ಮತ್ತು ಅವರ ಜ್ಞಾನ ಎಂಬುದಿರುವುದಿಲ್ಲ. ಪೂರ್ವ-ಪಶ್ಚಿಮಗಳ ಮೇಲಾಟ ಇರುವುದಿಲ್ಲ. ಭಾರತೀಯ ಜ್ಞಾನ ಪರಂಪರೆಗೆ ಐರೋಪ್ಯ ಸಂಸ್ಕೃತಿ ಕೊಡುಗೆ ಇದ್ದರೆ, ಐರೋಪ್ಯ ಪರಂಪರೆಯಲ್ಲಿ ಪೂರ್ವದ ಸಂಸ್ಕೃತಿಗಳು ಅಂತರ್ಗತಗೊಂಡಿರುತ್ತವೆ. ಜ್ಞಾನವನ್ನು ವಿಶ್ವಸ್ವರೂಪಿಯಾಗಿ ನೋಡಬೇಕಿದೆ ಎಂದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಸಮಕಾಲೀನ ಜ್ಞಾನ ಶಾಖೆಗಳು ಸಿದ್ಧಾಂತದ ಚೌಕಟ್ಟಿಗೆ ಸೀಮಿತವಾಗಿ ನಿಜವಾದ ಅರ್ಥದಲ್ಲಿ ಜ್ಞಾನಸಂವಾದ ಸಾಧ್ಯವಾಗುತ್ತಿಲ್ಲ. ಜ್ಞಾನ ಮತ್ತು ತತ್ವಜ್ಞಾನವು ಎಡ, ಬಲ, ಪ್ರತಿ ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ಮಹಾಸಂಗಮ ಎಂದು ತಿಳಿಸಿದರು.
ಸಮಾಜದಲ್ಲಿನ ಜ್ಞಾನ ಸಮಾನ ಮತ್ತು ನ್ಯಾಯಯುತ ಸಮಾಜಕ್ಕೆ ಅಡಿಪಾಯ, ಬಡತನ ಮತ್ತು ಜ್ಞಾನದ ಪಶ್ನೆ ಹಾಗೂ ಕನ್ನಡದ ಜ್ಞಾನ ಸಂಪ್ರದಾಯಗಳ ಕುರಿತು ವಿಚಾರಗೋಷ್ಠಿ ನಡೆಯಿತು. ಕುಲಸಚಿವರಾದ ಎ.ಎಲ್.ಮಂಜುನಾಥ್, ಪ್ರೊ. ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಎಚ್.ಎನ್.ರಮೇಶ್, ಡಿಕೆಎಸ್ ಜರ್ನಲ್ನ ಸುನಿಲ್ ಸಹಸ್ರಬುದ್ಧೆ, ಪ್ರೊ. ಕೃಷ್ಣನ್, ಸಮಾವೇಶದ ಸಂಯೋಜಕ ಪ್ರೊ. ಮೇಟಿ ಮಲ್ಲಿಕಾರ್ಜುನ್, ಪ್ರೊ. ರಾಮಪಸಾದ್ ಇತರರಿದ್ದರು.