ಭಾರತದ ಮೇಲೆ ಶೇ.25 ರಷ್ಟು ಸುಂಕ ಹೆಚ್ಚಳ: ಎಕ್ಸ್​ಪರ್ಟ್ಸ್​​ ಹೇಳಿದ್ದೇನು? | US tariffs

Modi Trump
Published on

US tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತ ಸರಕುಗಳ ಮೇಲೆ ವಿಧಿಸಿರುವ ಶೇ.25 ರಷ್ಟು ಹೆಚ್ಚುವರಿ ಸುಂಕವು ಭಾರತದ ಆರ್ಥಿಕತೆಗೆ ಹಾನಿ ಮಾಡುವ ಸಾಧ್ಯತೆಯಿಲ್ಲ ಎಂದು ವಿಷಯ (ತೆರಿಗೆ) ಪರಿಣಿತ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

ರಫ್ತು ಮತ್ತು ಜಿಡಿಪಿ ಮೇಲೆ ಸಣ್ಣ ಪ್ರಮಾಣದಲ್ಲಿ ಪರಿಣಾಮ ಬೀರಲಿದ್ದು, ಭಾರತದ ಪ್ರಮುಖ ಕ್ಷೇತ್ರಗಳಾಗಿರುವ ಕೃಷಿ, ಡೈರಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಸುರಕ್ಷಿತವಾಗಿರುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.

ಈಗಾಗಲೇ ಸರ್ಕಾರ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. 25% ಸುಂಕದಿಂದ ಸ್ವಲ್ಪ ಪರಿಣಾಮ ಬೀರಬಹುದು. ಆದರೆ, ಈ ಪರಿಣಾಮವು ಭಾರತೀಯ ಮಾರುಕಟ್ಟೆಗಳ ಮೇಲೆ ಆತಂಕ ಪಡುವ ರೀತಿಯ ಸನ್ನಿವೇಶ ಇಲ್ಲವಾದರೂ ಜಿಡಿಪಿ 0.2% ಕ್ಕಿಂತ ಕಡಿಮೆ ನಷ್ಟವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರೈತರ ವಿಷಯದಲ್ಲಿ ರಾಜಿ ಇಲ್ಲ

ಭಾರತ ಸರ್ಕಾರ ತನ್ನ ರೈತರ ಹಿತಾಸಕ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ರೈತರ ಹಿತಾಸಕ್ತಿ ಅತ್ಯಂತ ಮುಖ್ಯವಾಗಿದ್ದು, ತಳಿಯನ್ನು ಮಾರ್ಪಡಿಸಿದ (Genetically Modified) ಬೆಳೆಗಳ ಆಮದಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ನಮ್ಮ ದೇಶದ ಜನರ ಕೃಷಿ ಮತ್ತು ಡೈರಿ ವಲಯಗಳಿಗೆ ಹಾನಿ ಮಾಡುವ ಯಾವುದೇ ಷರತ್ತುಗಳನ್ನು ಭಾರತ ಒಪ್ಪುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಗೋಮಾಂಸದಂತಹ ವಿಷಯಗಳು ಆಹಾರ ಸುರಕ್ಷತೆ ಮತ್ತು ಧಾರ್ಮಿಕ ಭಾವನೆಯ ಅಡಿಯಲ್ಲಿ ಬರುವುದರಿಂದ ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ದೃಢಪಡಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ

ಸದ್ಯ ಭಾರತ ಸರ್ಕಾರ ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ. ಆ ಒಪ್ಪಂದವು ಜಾರಿಗೆ ಬಂದ ನಂತರ, ಎರಡೂ ದೇಶಗಳಿಗೆ ಸುಂಕದ ವಿಷಯವಾಗಿ ಪರಿಶೀಲಿಸಲು ಅವಕಾಶ ಸಿಗುತ್ತದೆ.

ಭಾರತ ಸರ್ಕಾರ ಯಾವುದೇ ರೀತಿಯ ಒತ್ತಡದಲ್ಲಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಸದಾ ಮುಂದಿರುತ್ತದೆ ಎಂದು ಮೂಲಗಳು ತಿಳಿಸಿವೆ. ಕೃಷಿ ಮತ್ತು ಎಂಎಸ್‌ಎಂಇ ವಲಯಗಳ ಹಿತಾಸಕ್ತಿಗಳನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಿಕೊಳ್ಳುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net