

ನವದೆಹಲಿ: ಮಹಾಮಾರಿ ಕರೊನಾ ವೈರಸ್ ಮೊದಲು ಸ್ಪೋಟಗೊಂಡ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ವಾಸವಿದ್ದ ಭಾರತೀಯರೊಬ್ಬರು ಚೀನಾ ಸರ್ಕಾರ ಹೇರಿದ್ದ ದೀರ್ಘ ಸಮಯದ ಲಾಕ್ಡೌನ್ ವೇಳೆ ತಾವು ಹೇಗೆ ಸಮಯ ಕಳೆದರೂ ಎಂಬುದನ್ನು ವಿವರಿಸಿದ್ದಾರೆ.
ಕರಾಳ ದಿನಗಳ ಬಗ್ಗೆ ಮಾತನಾಡಿರುವ ಶುವಮ್ ಪೌಲ್, ಕರೊನಾ ವೈರಸ್ ಮೊದಲು ಉಲ್ಬಣಗೊಂಡ ಚೀನಾದಲ್ಲಿ ಬಹುತೇಕ ಪ್ರದೇಶಗಳನ್ನು ಸ್ತಬ್ಧ ಮಾಡಲಾಗಿತ್ತು. ಅದರಲ್ಲೂ ಹುಬೇ ಪ್ರಾಂತ್ಯದ ವುಹಾನ್ ನಗರವನ್ನು ಜೈಲಿನಂತೆ ಮಾರ್ಪಾಡು ಮಾಡಲಾಗಿತ್ತು. ಯಾವುದೇ ಅಂಗಡಿ-ಮುಂಗಟ್ಟುಗಳಾಗಲಿ, ಶಾಪಿಂಗ್ ಮಾಲ್, ಥಿಯೇಟರ್, ಮ್ಯೂಸಿಯಂ ಹಾಗೂ ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲವನ್ನು ಬಂದ್ ಮಾಡಿಸಲಾಗಿತ್ತು. ಎಲ್ಲರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು ಎಂದಿದ್ದಾರೆ.
ಕ್ವಾರಂಟೈನ್ನಲ್ಲಿದ್ದಾಗ ಸಮಯ ಕಳೆಯಲು ಸಿನಿಮಾ ವೀಕ್ಷಿಸಿಸುವುದು, ಪುಸ್ತಕಗಳು ಮತ್ತು ಕಾದಂಬರಿಗಳನ್ನು ಓದುವುದು ಮತ್ತು ಕವಿತೆಯನ್ನು ಬರೆಯುವುದು ಮಾಡುತ್ತಿದ್ದೆ. ಬರೋಬ್ಬರಿ ಒಂದು ತಿಂಗಳ ಸಮೀಪ ವುಹಾನ್ಗೆ ದಿಗ್ಬಂಧನ ಹೇರಲಾಗಿತ್ತು. ಜನರು ಸಾಕಷ್ಟು ಹೈರಾಣಾಗಿದ್ದರು. ಆಹಾರಕ್ಕೂ ಸಾಕಷ್ಟು ಪರದಾಡುವಂತಾಯಿತು. ಇಡೀ ನಗರಕ್ಕೇ ನಗರವೇ ಬಿಕೋ ಎನ್ನುತ್ತಿತ್ತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತೀಯರಿಗೂ ಸಂದೇಶವನ್ನು ರವಾನಿಸಿರುವ ಪೌಲ್, ಆದಷ್ಟೂ ಎಲ್ಲರೂ ಪ್ರತ್ಯೇಕವಾಗಿರಿ. ಹೀಗಿದ್ದರೆ ಮಾತ್ರ ಸೋಂಕು ಹರಡುವುದನ್ನು ತಡೆಯಬಹುದು ಎಂದು ಹೇಳಿದರು. (ಏಜೆನ್ಸೀಸ್)