

ಸಾಗರ: ಭಾರತೀಯ ಸಂಸ್ಕೃತಿ ಎಂದರೆ ಅದು ಆರೋಗ್ಯಪೂರ್ಣ ಬದುಕಿಗೆ ಸೂತ್ರವಿದ್ದಂತೆ. ಹಾಗಾಗಿ ಸಂಸ್ಕೃತಿ, ಸಂಸ್ಕಾರದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.
ಸಾಗರದ ಪ್ರಗತಿ ನಗರದಲ್ಲಿ ಏರ್ಪಡಿಸಿದ್ದ ಗುರುಭಿಕ್ಷಾ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಆಚರಣೆ, ನಿಯಮ, ನಿಬಂಧನೆಗಳ ಹಿಂದಿರುವುದು ಬದುಕಿಗೆ ಬೇಕಾದ ಸೂತ್ರವೇ ಹೊರತು ಕಟ್ಟುಪಾಡುಗಳಲ್ಲ ಎಂದರು.
ರೋಗ ಇಲ್ಲದ, ದುಃಖವಿಲ್ಲದ ನೆಮ್ಮದಿಯ ಬದುಕನ್ನು ನಿರಾಮಯ ಎನ್ನಲಾಗುತ್ತದೆ. ಎಷ್ಟೋ ಸಂದರ್ಭ ಆಯಸ್ಸು, ಯಶಸ್ಸು, ಸಂಪತ್ತು ಎಲ್ಲವೂ ಜತೆಗಿದ್ದು ಆರೋಗ್ಯ ಮಾತ್ರ ಇರುವುದಿಲ್ಲ. ಆಗ ಬದುಕು ನೆಮ್ಮದಿಯಿಂದ ಇರುವುದಿಲ್ಲ. ಹಾಗಾಗಿ ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯದ ಬದುಕು ಹೇಗೆ ಎನ್ನುವುದನ್ನು ನಮ್ಮ ಪೂರ್ವಜರು ಹಾಕಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇಂದಿನ ಕಾಲಘಟ್ಟದಲ್ಲಿ ಹಣ ಸಂಪಾದನೆಯೇ ಬದುಕಿನ ಉದ್ದೇಶ ಎಂದು ಭಾವಿಸಿರುವುದು ತಪ್ಪು. ನಾವು ನಮ್ಮ ಆರೋಗ್ಯವನ್ನು ಬಲಿಕೊಟ್ಟು ಹಣ ಸಂಪಾದನೆಯ ಹಿಂದೆ ಬೀಳುತ್ತೇವೆ. ಕೊನೆಗೆ ಹಣ ಸಂಪಾದನೆಯಾದ ಮೇಲೆ ಕಳೆದುಕೊಂಡ ಆರೋಗ್ಯವನ್ನು ಪಡೆಯಲು ದುಡಿದ ಹಣ ವ್ಯಯ ಮಾಡುತ್ತ ಇಡೀ ಬದುಕನ್ನು ನೆಮ್ಮದಿ ಇಲ್ಲದೆ ಬಾಳುತ್ತೇವೆ. ಇದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಪ್ರತಿಯೊಬ್ಬರೂ ಯೋಚಿಸಬೇಕಿರುವುದು ಆರೋಗ್ಯ ಮತ್ತು ನೆಮ್ಮದಿ ಎನ್ನುವ ಸಂಪತ್ತಿನ ಬಗ್ಗೆಯೇ ಹೊರತು ಹಣದ ಕುರಿತಲ್ಲ ಎಂದರು.
ನಿರಾಮಯ ಸಂಸ್ಥೆ ಮಾಲೀಕರಾದ ಜ್ಯೋತಿ, ಮಹಾಬಲೇಶ್ವರ ಗುರುಭಿಕ್ಷೆ ಸೇವೆ ಸಲ್ಲಿಸಿದರು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಯಕ್ಷಗಾನ ಪ್ರದರ್ಶಿಸಿ ಮೆಚ್ಚುಗೆ ಪಡೆದ ಹೊಸೂರು ಶ್ರೀಲಕ್ಷಿ ಭಟ್ ಅವರನ್ನು ಆಶೀರ್ವದಿಸಿದರು.