

ಭಾರತೀಯ ಕ್ರಿಕೆಟ್ ಎಂದೂ ನಿಂತ ನೀರಲ್ಲ. 1932ರಲ್ಲಿ ಲಾರ್ಡ್ಸ್ನಲ್ಲಿ ಚೊಚ್ಚಲ ಟೆಸ್ಟ್ ಆಡುವುದರೊಂದಿಗೆ ಜನ್ಮ ತಳೆದ ಭಾರತ ಕ್ರಿಕೆಟ್ ತಂಡ, ಸ್ವಾತಂತ್ರ್ಯದ ನಂತರ ಹೊಸ ರೂಪವನ್ನು ಪಡೆದುಕೊಂಡಿತು. ಅದುವರೆಗೆ ಮಹಾರಾಜರ ಪ್ರತಿಷ್ಠೆಯ ಆಟವಾಗಿದ್ದ ಕ್ರಿಕೆಟ್ ಜನಸಾಮಾನ್ಯರಿಗೂ ಒಲಿದುಬಂತು. 1971ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ನಲ್ಲಿ ಸಾಧಿಸಿದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವುಗಳು ಭಾರತೀಯ ಕ್ರಿಕೆಟ್ಗೆ ಹೊಸ ಉತ್ತೇಜನ ನೀಡಿದರೆ, 1983ರ ಏಕದಿನ ವಿಶ್ವಕಪ್ ಗೆಲುವು ಅದರ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿತು.
2007ರ ಟಿ20 ವಿಶ್ವಕಪ್ ಗೆಲುವು ಭಾರತೀಯ ಕ್ರಿಕೆಟ್ ಆಟವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಐಪಿಎಲ್ ಜನ್ಮತಾಳಲು ಕಾರಣವಾಯಿತು. 2011ರ ಏಕದಿನ ವಿಶ್ವಕಪ್, 2016ರ ಟೆಸ್ಟ್ ಚಾಂಪಿಯನ್ಷಿಪ್ ‘ಗದೆ’ ಗೆಲುವುಗಳು ಭಾರತ ತಂಡ, ಜಾಗತಿಕ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಲು ನೆರವಾಯಿತು. ಈ ನಡುವೆ 2000ದ ಮ್ಯಾಚ್ ಫಿಕ್ಸಿಂಗ್ ಹಗರಣ, 2013ರ ಐಪಿಎಲ್ ಬೆಟ್ಟಿಂಗ್-ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು ಭಾರತೀಯ ಕ್ರಿಕೆಟ್ ಆಡಳಿತದ ಸುಧಾರಣೆಗೆ ದಾರಿಮಾಡಿ ಕೊಟ್ಟಿತು. 2023ರ ಏಕದಿನ ವಿಶ್ವಕಪ್ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶ, 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಗೆಲುವುಗಳು ಭಾರತ, ಐಸಿಸಿ ಟೂರ್ನಿಗಳಲ್ಲಿ ಮತ್ತೆ ಮೇಲುಗೈ ಸಾಧಿಸುವಂತೆ ಮಾಡಿದೆ.
ಈ ಸಾಧನೆಯ ಹಾದಿಯಲ್ಲಿ ಭಾರತೀಯ ಕ್ರಿಕೆಟ್ ತಂಡಗಳ ನಾಯಕರ ಕೊಡುಗೆಗಳು ಮಹತ್ವದ್ದಾಗಿವೆ. 1983ರ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್, ಮ್ಯಾಚ್ ಫಿಕ್ಸಿಂಗ್ ಭುಗಿಲೆದ್ದ ಸಮಯದಲ್ಲಿ ಭಾರತ ತಂಡಕ್ಕೆ ಹೊಸ ಭರವಸೆ ತಂದುಕೊಟ್ಟ ಸೌರವ್ ಗಂಗೂಲಿ, ಭಾರತಕ್ಕೆ ಸತತ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ ಎಂಎಸ್ ಧೋನಿ, ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಉತ್ತುಂಗಕ್ಕೇರಿಸಿದ ವಿರಾಟ್ ಕೊಹ್ಲಿ, ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ದಶಕದ ಟ್ರೋಫಿ ಬರ ನೀಗಿಸಿದ ರೋಹಿತ್ ಶರ್ಮ ಹಲವಾರು ಸವಾಲುಗಳ ನಡುವೆ ಯಶಸ್ಸಿನ ಮೆಟ್ಟಿಲು ಏರಿದ್ದರು.
ಇದೀಗ ಭಾರತೀಯ ಕ್ರಿಕೆಟ್ನಲ್ಲಿ ಮತ್ತೆ ಬದಲಾವಣೆಯ ಪರ್ವ ಶುರುವಾಗಿದ್ದು, ಜೆನ್ ಝೀ ಆಟಗಾರ ಶುಭಮಾನ್ ಗಿಲ್ ನಾಯಕನಾಗಿ ನೇಮಕಗೊಂಡಿದ್ದಾರೆ. ಶುಭಮಾನ್ಗೆ ಟೆಸ್ಟ್ ನಂತರ ಏಕದಿನ ತಂಡದ ನಾಯಕತ್ವವನ್ನೂ ವಹಿಸಲಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ತಂಡದ ನಾಯಕತ್ವವೂ ಗಿಲ್ ಪಾಲಾಗುವ ಲೆಕ್ಕಾಚಾರವಿದೆ. ಎಲ್ಲೆಡೆ ಜೆನ್ ಝೆಡ್ ಹವಾ ಶುರುವಾಗಿರುವ ಸಮಯದಲ್ಲಿ ಭಾರತೀಯ ಕ್ರಿಕೆಟ್ನಲ್ಲೂ ಅದರ ಗಾಳಿ ಬೀಸುತ್ತಿದೆ.
ಯುವಕರ ತಂಡ ಕಟ್ಟುವ ಸವಾಲು
ಎಲ್ಲ ಕ್ಷೇತ್ರಗಳಲ್ಲೂ ‘ಜೆನ್ ಝೆಡ್’ ಕ್ರಾಂತಿ ಮಾಡುತ್ತಿರುವ ಸಮಯದಲ್ಲಿ ಭಾರತೀಯ ಕ್ರಿಕೆಟ್ ಕೂಡ ಅದಕ್ಕೆ ತೆರೆದುಕೊಂಡಿದೆ. ಭಾರತೀಯ ಕ್ರಿಕೆಟ್ ತಂಡದ ಹೊಸ ರನ್ ಮೆಷಿನ್ ಆಗಿ ಮಿಂಚಿದ ಬೆನ್ನಲ್ಲೇ 26 ವರ್ಷದ ಶುಭಮಾನ್ ಗಿಲ್ಗೆ ನಾಯಕತ್ವವೂ ಒಲಿದುಬಂದಿದೆ. ಸೂಪರ್ಸ್ಟಾರ್ಗಳು ತೆರೆಮರೆಗೆ ಸರಿದು, ಯುವಕರು ಕಾಯಂ ಸ್ಥಾನ ಕಂಡುಕೊಳ್ಳಲು ಶ್ರಮಿಸುತ್ತಿರುವ ಸ್ಥಿತ್ಯಂತರದ ಸಮಯದಲ್ಲಿ ಗಿಲ್ ನಾಯಕತ್ವದ ಸವಾಲು ಪಡೆದುಕೊಂಡಿದ್ದು, ಆಕ್ರಮಣಕಾರಿ ಕೋಚ್ ಗೌತಮ್ ಗಂಭೀರ್ ಮತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿರುವ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಬೆಂಬಲವೂ ಲಭಿಸಿದೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಸವಾಲಿನ 5 ಪಂದ್ಯಗಳ ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯಲ್ಲಿ ಬ್ಯಾಟಿಂಗ್ ಮತ್ತು ನಾಯಕತ್ವದಲ್ಲಿ ಗಿಲ್ ತೋರಿದ ದಿಟ್ಟತನ ಅವರ ಮೇಲಿನ ಭರವಸೆಯನ್ನೂ ಹೆಚ್ಚಿಸಿದೆ. ಆದರೆ ನಾಯಕತ್ವದ ಈ ‘ಹನಿಮೂನ್ ಅವಧಿ’ ಮುಗಿದ ಬಳಿಕದ ಅಸಲಿ ಸವಾಲುಗಳು ಸುಲಭವಾದುದಲ್ಲ. 2027ರ ಏಕದಿನ ವಿಶ್ವಕಪ್ಗೆ ತಂಡ ಕಟ್ಟುವ ಹಾದಿಯಲ್ಲಿ ಹಲವು ಸವಾಲುಗಳು ಗಿಲ್ ಮುಂದಿವೆ. 2027ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರಿಸುವ ನಿಟ್ಟಿನಲ್ಲೂ ಭಾರತ ತಂಡ ಬಲಿಷ್ಠ ನಿರ್ವಹಣೆ ತೋರಿಸಬೇಕಾಗಿದೆ. ಜತೆಗೆ ಅನುಭವಿ, ಯಶಸ್ವಿ ಸಾರಥಿ ರೋಹಿತ್ರಿಂದ ನಾಯಕತ್ವದ ಹೊಣೆ ಪಡೆದುಕೊಂಡಿರುವುದರಿಂದ ಅವರ ಮೇಲಿನ ನಿರೀಕ್ಷೆಯೂ ಹೆಚ್ಚಿದೆ. ಅದನ್ನು ಈಡೇರಿಸಿದರಷಡ್ಟೇ ಅವರ ಪಟ್ಟ ಇನ್ನೊಂದು
ಭಾರತೀಯ ಕ್ರಿಕೆಟ್ ತಾಕತ್ತು ತೋರಿಸಿದ್ದ ಕಪಿಲ್
ಏಕದಿನ ವಿಶ್ವಕಪ್ ಟೂರ್ನಿಯ ಮೊದಲ 2 ಆವೃತ್ತಿಗಳಲ್ಲಿ ಭಾರತ ಕೇವಲ ಲೆಕ್ಕಭರ್ತಿಯ ತಂಡವಾಗಿತ್ತು. ಆದರೆ, ‘ನಾವು ಬರೀ ಆಡಲಷ್ಟೇ ಅಲ್ಲ, ಟ್ರೋಫಿ ಗೆಲ್ಲಲು ಬಂದಿದ್ದೇವೆ’ ಎಂದು 1983ರ ಆವೃತ್ತಿಗೆ ಮೊದಲೇ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದ ಕಪಿಲ್ ದೇವ್, ತನ್ನ ಮಾತನ್ನು ನಿಜಮಾಡಿ ತೋರಿಸಿದ್ದರು. ಬಲಾಢ್ಯ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳನ್ನು ಮಣಿಸುವ ಮೂಲಕ ಭಾರತ ವಿಶ್ವಕಪ್ ಗೆದ್ದಿತ್ತು. ಇದರಲ್ಲಿ ಕಪಿಲ್ ದೇವ್ ಆಲ್ರೌಂಡರ್ ಆಗಿ ಮಿಂಚಿದ್ದು ಮಾತ್ರವಲ್ಲ, 24ನೇ ವಯಸ್ಸಿನಲ್ಲೇ ತನ್ನ ನಾಯಕತ್ವ ಗುಣವನ್ನು ಸಾಬೀತುಪಡಿಸಿದ್ದರು. ಆ ಒಂದು ವಿಶ್ವಕಪ್ ಗೆಲುವು ಭಾರತೀಯ ಕ್ರಿಕೆಟ್ ದೆಸೆಯನ್ನೇ ಬದಲಾಯಿಸಿದ್ದು ಸುಳ್ಳಲ್ಲ. ಜತೆಗೆ ನಾಯಕನ ಆತ್ಮವಿಶ್ವಾಸ ತಂಡದ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ತೋರಿಸಿಕೊಟ್ಟಿತ್ತು.
ಅಜರುದ್ದೀನ್ ಆಧಾರ
ಸುನೀಲ್ ಗಾವಸ್ಕರ್, ಕಪಿಲ್ ದೇವ್ ಮುಂತಾದ 80ರ ದಶಕದ ಪ್ರಮುಖ ಆಟಗಾರರ ನಿವೃತ್ತಿ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಸಚಿನ್ ತೆಂಡುಲ್ಕರ್ ಹೆಗಲೇರಿದ್ದ ಸಮಯದಲ್ಲಿ, ಭಾರತ ತಂಡದ ಚುಕ್ಕಾಣಿ ಹಿಡಿದಿದ್ದವರು ಮೊಹಮದ್ ಅಜರುದ್ದೀನ್. ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ತೆಂಡುಲ್ಕರ್ರನ್ನು ಅವಲಂಬಿಸಿದ್ದ ಆ ಸಮಯದಲ್ಲಿ ಅಜರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ರಂಥ ಯುವ ಬ್ಯಾಟರ್ಗಳಿಗೆ ಅವಕಾಶ ಕಲ್ಪಿಸಿದ್ದರು. ಭಾರತ ತಂಡ ಸ್ಥಿರ ನಿರ್ವಹಣೆ ತೋರಲು ಪರದಾಡುತ್ತಿದ್ದ ಆ ಕಾಲಘಟ್ಟದಲ್ಲಿ ಅಜರುದ್ದೀನ್, ಕನಿಷ್ಠ ತವರಿನಲ್ಲಾದರೂ ಹುಲಿ ಎಂದು ತೋರಿಸುವಂಥ ತಂಡವನ್ನು ಕಟ್ಟಿದ್ದರು. ಆದರೆ, ಮ್ಯಾಚ್ಫಿಕ್ಸಿಂಗ್ ಹಗರಣ ಅಜರ್ ವೃತ್ತಿಜೀವನಕ್ಕೆ ಮಸಿಬಳಿಯಿತು.
ರೋಹಿತ್ಗೆ ಯಶಸ್ಸಿನ ನಡುವೆ ಮುಳುವಾದ ವಯಸ್ಸು!
ಭಾರತ ತಂಡದ ಐಸಿಸಿ ಟ್ರೋಫಿ ಗೆಲುವಿನ ಕೊರತೆ ನೀಗಿಸುವ ಜವಾಬ್ದಾರಿಯನ್ನು ರೋಹಿತ್ ಶರ್ಮ ಸಮರ್ಥವಾಗಿಯೇ ನಿರ್ವಹಿಸಿದ್ದರು. ಇವರಿಗೆ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನವೂ ದೊಡ್ಡ ಬಲವನ್ನು ತುಂಬಿತ್ತು. ನಾಯಕತ್ವದ ಆರಂಭದಲ್ಲಿ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲು, 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲು ರೋಹಿತ್ಗೆ ಹಿನ್ನಡೆಯಾಗಿದ್ದವು. ಆದರೆ ತಾಳ್ಮೆ ಕಳೆದುಕೊಳ್ಳದೆ ತಂಡವನ್ನು ಬಲಿಷ್ಠವಾಗಿ ಕಟ್ಟಿದ್ದ ರೋಹಿತ್, 2023ರ ತವರಿನ ಏಕದಿನ ವಿಶ್ವಕಪ್ನಲ್ಲಿ ಸತತ 10 ಗೆಲುವಿನೊಂದಿಗೆ ಅಜೇಯವಾಗಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದರು. ಆದರೆ ಪ್ರಶಸ್ತಿ ಬರ ಮುಂದುವರಿದಿತ್ತು. ನಂತರ 2024ರ ಟಿ20 ವಿಶ್ವಕಪ್ ಗೆಲುವಿನೊಂದಿಗೆ ರೋಹಿತ್, ದಶಕದ ಪ್ರಶಸ್ತಿ ಬರವನ್ನು ನೀಗಿಸಿದ್ದರು. ಎಂಟೇ ತಿಂಗಳ ಅಂತರದಲ್ಲಿ ಹಾಲಿ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲೂ ಭಾರತವನ್ನು ಅಜೇಯವಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆದರೆ ಈ ಭರ್ಜರಿ ಯಶಸ್ಸುಗಳ ನಡುವೆಯೂ ‘ಜೆನ್ ಝೆಡ್’ ಹೊಡೆತಕ್ಕೆ ನಾಯಕತ್ವ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಏರುತ್ತಿರುವ ಅವರ ವಯಸ್ಸು ದೊಡ್ಡ ಹಿನ್ನಡೆ ಎನಿಸಿದೆ. 38 ವರ್ಷದ ರೋಹಿತ್ ಪಾಲಿಗೆ 2027ರ ಏಕದಿನ ವಿಶ್ವಕಪ್ ನಾಯಕತ್ವದ ಕನಸು ಭಗ್ನಗೊಂಡಿದೆ.
ಐಸಿಸಿ ಟೂರ್ನಿಗಳಲ್ಲಿ ಧೋನಿ ಪ್ರಾಬಲ್ಯ
ಗಂಗೂಲಿ ಹಾಕಿಕೊಟ್ಟಿದ್ದ ಬುನಾದಿಯಿಂದ ಭಾರತ ತಂಡ, ಐಸಿಸಿ ಟೂರ್ನಿಗಳಲ್ಲೂ ಪ್ರಾಬಲ್ಯ ಸಾಧಿಸುವಂತೆ ಉತ್ತುಂಗಕ್ಕೆ ಏರಿಸಿದವರು ಮಹೇಂದ್ರ ಸಿಂಗ್ ಧೋನಿ. 2007ರ ಟಿ20 ವಿಶ್ವಕಪ್ನಲ್ಲಿ ಯುವ ತಂಡವನ್ನು ಮುನ್ನಡೆಸುವ ಅನಿರೀಕ್ಷಿತ ಅವಕಾಶ ದೊರೆತಾಗ ಧೋನಿ ಪ್ರಶಸ್ತಿ ಗೆಲ್ಲಿಸಿಕೊಡುವ ಮೂಲಕ ತನ್ನ ನಾಯಕತ್ವ ಗುಣದಿಂದ ಗಮನಸೆಳೆದಿದ್ದರು. ಅಲ್ಲಿಂದ ಮುಂದೆ ಅವರು ಮುಟ್ಟಿದ್ದೆಲ್ಲ ಚಿನ್ನವಾಯಿತು. ಆಗೊಮ್ಮೆ ಈಗೊಮ್ಮೆ ಪ್ರಶಸ್ತಿ ಗೆಲ್ಲುತ್ತಿದ್ದ ತಂಡಕ್ಕೆ ಅದನ್ನೇ ಅಭ್ಯಾಸವಾಗಿಸಿದ್ದರು. 2011ರಲ್ಲಿ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವುಗಳು ಧೋನಿ ಅವರನ್ನು ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ನಾಯಕರನ್ನಾಗಿಸಿತು. ಇದೇ ಸಮಯದಲ್ಲಿ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರಂಥ ತಾರೆಯರನ್ನು ಭಾರತೀಯ ಕ್ರಿಕೆಟ್ಗೆ ಅರ್ಪಿಸಿದ್ದರು. ಮಾತ್ರವಲ್ಲ ನಾಯಕತ್ವದಲ್ಲೂ ಅವರು ಉತ್ತರಾಧಿಕಾರಿಗಳಾದರು.
ಜೋಶ್ ತುಂಬಿದ್ದ ಗಂಗೂಲಿ
ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಭಾರತೀಯ ಕ್ರಿಕೆಟ್ ದಿಕ್ಕೆಟ್ಟು ನಿಂತಿದ್ದ ಮತ್ತು ಸಚಿನ್ ತೆಂಡುಲ್ಕರ್ ಕೇವಲ ಬ್ಯಾಟಿಂಗ್ನತ್ತ ಗಮನಹರಿಸಿದ್ದ ಸಮಯದಲ್ಲಿ ಭಾರತ ತಂಡದ ಸಾರಥ್ಯ ವಹಿಸಿಕೊಂಡಿದ್ದವರು ಸೌರವ್ ಗಂಗೂಲಿ. ಅನುಭವ ಮತ್ತು ಯುವಕರ ಬಲದ ತಂಡವನ್ನು ಕಟ್ಟಿದ್ದ ಗಂಗೂಲಿ, ಭಾರತೀಯ ಕ್ರಿಕೆಟ್ಗೆ ಹೊಸ ಜೋಶ್ ತುಂಬಿದ್ದರು. ವಿದೇಶಿ ನೆಲದಲ್ಲೂ ಗೆಲ್ಲುವ ಆತ್ಮವಿಶ್ವಾಸವನ್ನು ತಂಡಕ್ಕೆ ತುಂಬಿದ್ದರು. 2001ರಲ್ಲಿ ತವರಿನಲ್ಲಿ ಮತ್ತು 2004ರ ಆಸೀಸ್ ಪ್ರವಾಸದಲ್ಲಿ ಅವರ ಟೆಸ್ಟ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದರು. 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಸುಮಾರು 2 ದಶಕಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. 2003ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ಗೇರಿಸಿದ ಸಾಧನೆಯೊಂದಿಗೆ ಭಾರತ ತಂಡವನ್ನು ‘ಟೀಮ್ ಇಂಡಿಯಾ’ ಆಗಿ ಬದಲಾಯಿಸಿದ್ದರು. ಯುವರಾಜ್ ಸಿಂಗ್, ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಎಂಎಸ್ ಧೋನಿ ಅವರಂಥ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಭಾರತ ತಂಡಕ್ಕೆ ಪರಿಚಯಿಸಿದ್ದರು. ತನ್ನ ನೆಚ್ಚಿನ ಆಟಗಾರರ ಪಡೆ ಕಟ್ಟಿದ್ದ ಅವರಿಗೆ 2005ರಲ್ಲಿ ಅವರದೇ ಶಿಫಾರಸಿನ ಮೇರೆಗೆ ಕೋಚ್ ಆಗಿ ಬಂದ ಗ್ರೆಗ್ ಚಾಪೆಲ್ ಮುಳುವಾಗಿದ್ದರು. ಇಲ್ಲದಿದ್ದರೆ, ಭಾರತ ತಂಡದ ನಾಯಕರಾಗಿ ಇನ್ನಷ್ಟು ವರ್ಷ ಮೆರೆಯುವ ಅವಕಾಶ ಅವರ ಮುಂದಿತ್ತು. ಗಂಗೂಲಿಗೆ ಉಪನಾಯಕರಾಗಿ ಬೆಂಬಲ ಒದಗಿಸಿದ್ದ ರಾಹುಲ್ ದ್ರಾವಿಡ್, ನಂತರ ಅವರ ಉತ್ತರಾಧಿಕಾರಿಯಾಗಿ 2 ವರ್ಷಗಳ ಕಾಲ ಭಾರತವನ್ನು ಮುನ್ನಡೆಸಿ ಯುವಕರಿಗೆ
ಕೊಹ್ಲಿಗೆ ಮುಳುವಾಗಿದ್ದ ಐಸಿಸಿ ಟ್ರೋಫಿ ಕೊರತೆ
2008ರಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದಾಗಲೇ ವಿರಾಟ್ ಕೊಹ್ಲಿ ಅವರಲ್ಲಿ ಭವಿಷ್ಯದ ಟೀಮ್ ಇಂಡಿಯಾ ನಾಯಕ ಕಾಣಿಸಿದ್ದರು. 2014ರ ಅಂತ್ಯದಲ್ಲಿ ಮೊದಲಿಗೆ ಟೆಸ್ಟ್ ನಾಯಕತ್ವವನ್ನು ಪಡೆದುಕೊಂಡಿದ್ದ ಕೊಹ್ಲಿ, 2016ರಿಂದ 2020ರ ಅವಧಿಯಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್ ಪ್ರಾಬಲ್ಯ ಸಾಧಿಸುವಂತೆ ಮಾಡಿದ್ದರು. ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲೂ ಭಾರತ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರಮಿಸಿದ್ದರು. ಆದರೆ ಐಸಿಸಿ ಟ್ರೋಫಿ ಗೆಲುವಿನ ಕೊರತೆ ಕೊಹ್ಲಿ ನಾಯಕತ್ವವನ್ನು ದೀರ್ಘಕಾಲ ಕಾಯ್ದುಕೊಳ್ಳಲು ಅಡ್ಡಿಯಾಯಿತು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲು, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲು, 2021ರ ಟಿ20 ವಿಶ್ವಕಪ್ ವೈಫಲ್ಯ, ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲು ಕೊಹ್ಲಿ ನಾಯಕತ್ವಕ್ಕೆ ಮುಳುವಾಗಿತ್ತು.
-ಪ್ರಸಾದ್ ಶೆಟ್ಟಿಗಾರ್