

ಲಖನೌ: ಭಾರತೀಯ ಸೇನೆಯ ಯೋಧರಿಗಾಗಿ ಬುಲೆಟ್ ಪ್ರೂಫ್ ಜಾಕೆಟ್ ಕಂಡು ಹಿಡಿದಿದ್ದ ಮೇಜರ್ ಅನೂಪ್ ಮಿಶ್ರಾ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ.
ಸೈನಿಕರಿಗಾಗಿ ಗುಂಡು ನಿರೋಧಕ ಹೆಲ್ಮೆಟ್ (ಶಿರಸ್ತ್ರಾಣ)ನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಸ್ನೈಪರ್ ಗುಂಡುಗಳಿಂದ ಯೋಧರನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ಸುಮಾರು 10 ಮೀಟರ್ವರೆಗಿನ ಅಂತರದಿಂದ ನುಗ್ಗಿ ಬರುವ ಎಕೆ 47 ಗುಂಡುಗಳನ್ನೂ ತಡೆದುಕೊಳ್ಳಬಲ್ಲ ವಿಶ್ವದ ಮೊದಲ ಬುಲೆಟ್ಪ್ರೂಫ್ ಹೆಲ್ಮೆಟ್ ಎನ್ನಲಾಗಿದೆ.
ಅಭೇದ್ಯ ಎಂಬ ಕಲ್ಪನೆಯಡಿ ಈ ಬುಲೆಟ್ ಪ್ರೂಫ್ ಹೆಲ್ಮೆಟ್ನ್ನು ಮೇಜರ್ ಅನೂಪ್ ಮಿಶ್ರಾ ಅಭಿವೃದ್ಧಿಪಡಿಸಿದ್ದಾಗಿ ಸೇನಾ ಮೂಲಗಳು ತಿಳಿಸಿವೆ.
ಇದಲ್ಲದೆ, ಭಾರತೀಯ ಸೇನೆಯ ಮಿಲಿಟರಿ ಇಂಜಿನಿಯರಿಂಗ್ ಕಾಲೇಜು, ಖಾಸಗಿ ಸಂಸ್ಥೆಯೊಂದಿಗೆ ಜಂಟಿಯಾಗಿ ಭಾರತದ ಮೊದಲ, ಜಗತ್ತಿನಲ್ಲೇ ಅತೀ ಅಗ್ಗದ ಗನ್ಶಾಟ್ ಲೊಕೇಟರ್ನ್ನು ಕಂಡು ಹಿಡಿದಿದೆ. (ಗನ್ ಶಾಟ್ ಲೊಕೇಟರ್ ಎಂದರೆ ಬುಲೆಟ್ಗಳು ತೂರಿಬಂದ ಸ್ಥಳ ಪತ್ತೆ ಹಚ್ಚುವ ಸಾಧನ). ಸುಮಾರು 400 ಮೀಟರ್ ಅಂತರದಿಂದ ಬರುವ ಬುಲೆಟ್ಗಳ ಸ್ಥಳ ಪತ್ತೆಹಚ್ಚುವಷ್ಟು ಸಾಮರ್ಥ್ಯವನ್ನು ಇದು ಹೊಂದಿದ್ದು, ಉಗ್ರರನ್ನು, ಶತ್ರುಗಳನ್ನು ಸದೆ ಬಡಿಯಲು ತುಂಬ ಅನುಕೂಲಕರವಾಗಿದೆ.