

ಲಡಾಖ್: ಚೀನಾ ಮತ್ತು ಭಾರತದ ನಡುವಿನ ಬಿಕ್ಕಟ್ಟಿನ ನಡುವೆಯೇ ಚೀನಾದ ಸೈನಿಕನೊಬ್ಬ ಲಡಾಖ್ನಲ್ಲಿರುವ ಗಡಿ ದಾಟಿ ಭಾರತಕ್ಕೆ ಬಂದಿದ್ದು, ಭಾರತೀಯ ಸೈನಿಕರು ಆತನನ್ನು ವಶಕ್ಕೆ ಪಡೆದಿದ್ದಾರೆ. ಸೈನಿಕನು ದಾರಿ ತಪ್ಪಿ ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ವಾಪಾಸು ಕಳಿಸುವ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ.
ಮೂಲಗಳ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಯ ಸೈನಿಕನು ಶುಕ್ರವಾರ ಬೆಳಗ್ಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಗೆ ಬಂದಿದ್ದಾನೆ ಎನ್ನಲಾಗಿದೆ. ತಕ್ಷಣ ಆತನನ್ನು ಭಾರತೀಯ ಯೋಧರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಆತ ದಾರಿ ತಪ್ಪಿ ಈ ಭಾಗಕ್ಕೆ ಬಂದಿರುವುದು ಖಚಿತವಾಗಲಿದೆ. ಹಾಗಾಗಿ ನಿಯಮಾನುಸಾರ ಆತನನ್ನು ಚೀನಾಕ್ಕೆ ಕಳುಹಿಸಿಕೊಡಲಾಗುವುದು. ಇಂದು ಅಥವಾ ನಾಳೆ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)