ಗಡಿಯಲ್ಲಿ ಮತ್ತೆ ಜಟಾಪಟಿ: ಕಲ್ಲು ತೂರಾಟಕ್ಕಿಳಿದ ಚೀನಾ ಸೈನಿಕರು!

china-india-web
Published on

ಸಿಕ್ಕಿಂ: ಸಿಕ್ಕಿಂನ ಗಡಿ ಭಾಗದಲ್ಲಿ ಚೀನಾ ಸೈನಿಕರು, ಭಾರತೀಯ ಯೋಧರ ಜತೆ ಘರ್ಷಣೆಗೆ ಇಳಿಯುವುದು ಕೆಲ ವರ್ಷಗಳಿಂದ ಸಾಮಾನ್ಯವಾಗಿಬಿಟ್ಟಿದೆ. ಚೀನಾದ ಸೈನಿಕರಿಗೆ ಎದುರೇಟು ನೀಡುವಲ್ಲಿ ಭಾರತೀಯ ಯೋಧರು ಕೂಡ ಹಿಂದೆ ಬಿದ್ದಿಲ್ಲ.

ಇದೇ ರೀತಿಯ ಕಾದಾಟ ಮೇ 5 ಮತ್ತು 6ರ ರಾತ್ರಿ ನಾ ಕುಲಾ ಪ್ರಾಂತ್ಯದ ಪಂಗಾಂಗ್​ ನದಿ ತೀರದ ಬಳಿ ನಡೆದಿದೆ. ಚೀನಾದ ಸೈನಿಕರು ಭಾರತೀಯ ಯೋಧರ ಮೇಲೆ ಕಲ್ಲು ತೂರಾಟ ನಡೆಸುವ ಹಂತಕ್ಕೆ ಹೋಗಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರೂ ಎದುರೇಟು ನೀಡಿದ್ದಾರೆ.

ವರದಿಗಳ ಪ್ರಕಾರ, ಎರಡೂ ಕಡೆಗಳಲ್ಲಿ ಅನೇಕ ಸೈನಿಕರು ಗಾಯಗೊಂಡಿದ್ದಾರೆ. ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಆದರೂ. ಸದ್ಯ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ವರದಿಯಾಗಿದೆ.

ಈ ಗಡಿ ಭಾಗದಲ್ಲಿ ಇರುವ 3,488 ಕಿ.ಮೀ ಜಾಗ ತಮ್ಮದೇ ಎಂದು ಉಭಯ ದೇಶಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಇಲ್ಲಿ ಗಲಾಟೆ ಸಂಭವಿಸುತ್ತಲೇ ಇದೆ. ಅರುಣಾಚಲ ಪ್ರದೇಶದಲ್ಲಿರುವ ಈ ಭಾಗವು ಟಿಬೆಟ್​ ಭಾಗವಾಗಿದ್ದು ಅದು ತನಗೆ ಸೇರಿದ್ದು ಎಂದು ಚೀನಾ ಹೇಳಿದರೆ, ಈ ಭಾಗ ತಮಗೆ ಸೇರಬೇಕಾದದ್ದ ಎಂಬುದು ಭಾರತದ ವಾದ.

ಕಳೆದ ವರ್ಷ, ಲಡಾಖ್‌ನ ಪೆಂಗಾಂಗ್ ಸರೋವರದ ಬಳಿ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದ ಸುದ್ದಿಗಳು ಬಹಿರಂಗವಾಗಿದ್ದವು. ಎರಡೂ ದೇಶಗಳ ನಡುವೆ 'ಫೇಸ್‌ಆಫ್' ಸನ್ನಿವೇಶ ಸೃಷ್ಟಿಯಾಗಿತ್ತು. ನಂತರ ಎರಡೂ ದೇಶಗಳ ಬ್ರಿಗೇಡಿಯರ್ ಮಟ್ಟದ ಸಂವಾದದ ಬಳಿಕ ವಿಷಯವನ್ನು ಬಗೆಹರಿಸಲಾಗಿತ್ತು.

ಅದಕ್ಕೂ ಮುಂಚೆ, ಅಂದರೆ 2017 ರಲ್ಲಿ ಇದೇ ಸ್ಥಳದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಚೀನಾದವರು ಕಾದಾಟಕ್ಕೆ ಇಳಿದಾಗ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದರು. ಗಸ್ತು ತಿರುಗುತ್ತಿದ್ದಾಗ, ಭಾರತೀಯ ಸೈನಿಕರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕರನ್ನು ಎದುರಿಸಿದ್ದರು ಎಂದು ವರದಿಗಳು ಹೇಳಿವೆ. 1962ರಿಂದ ಲಡಾಖ್​ ಪ್ರದೇಶದಲ್ಲಿ ಈ ಎರಡೂ ದೇಶಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net