

ಶಿವಮೊಗ್ಗ: ಅಪರಾಧ ಕೃತ್ಯವೆಸಗಿದಾತ ಜೈಲು ಸೇರಿದ ಬಳಿಕವೂ ಮಾನವೀಯ ದೃಷ್ಟಿಯಿಂದ ಆತನನ್ನು ನಡೆಸಿಕೊಳ್ಳುವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಮಾನವ ಹಕ್ಕುಗಳ ಮೌಲ್ಯಕ್ಕೆ ಇದು ಅತ್ಯುತ್ತಮ ನಿದರ್ಶನ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಅಭಿಪ್ರಾಯಪಟ್ಟರು.
ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಸಂಸ್ಥೆ 1948ರ ಡಿ.10ರಂದು ಮಾನವ ಹಕ್ಕುಗಳನ್ನು ಸಾರ್ವತ್ರಿಕವಾಗಿ ಘೋಷಿಸಿತು. ಹಾಗಾಗಿ ಈ ದಿನದಂದು ಮಾನವ ಹಕ್ಕುಗಳ ದಿನಾಚರಣೆ ಮಾಡಲಾಗುತ್ತಿದೆ ಎಂದರು.
2011ರ ನ.26ರಂದು ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ ಸಾವು, ನೋವಿಗೆ ಕಾರಣರಾದರು. ಸೆರೆ ಸಿಕ್ಕ ಓರ್ವನ ಪರವಾಗಿ ವಕೀಲರನ್ನು ನೇಮಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಯಿತು. ಆತ ತಪ್ಪಿತಸ್ಥ ಎಂಬುದು ದೃಢಪಟ್ಟ ಮೇಲೂ ಜೈಲಿನಲ್ಲಿ ಮಾನವೀಯತೆಯಿಂದ ನೋಡಿಕೊಳ್ಳಲಾಯಿತು. ಇದು ಮಾನವ ಹಕ್ಕುಗಳ ಮೌಲ್ಯಕ್ಕಿರುವ ಒಂದು ಉದಾಹರಣೆ. ಮಾನವ ಹಕ್ಕುಗಳಿಗೆ ನಮ್ಮ ದೇಶದಲ್ಲಿರುವ ಪ್ರಾಮುಖ್ಯತೆಗೆ ಇದು ಉದಾಹರಣೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಶೋಷಿತ ವರ್ಗದವರಿಗೆ, ಜೈಲಿನ ಕೈದಿಗಳ ರಕ್ಷಣೆಗೆ ಉಚಿತವಾಗಿ ಕಾನೂನಿನ ನೆರವು ನೀಡುತ್ತದೆ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದಂತೆಯೇ ಎನ್‌ಜಿಒ ಪಾತ್ರವೂ ಬಹಳ ದೊಡ್ಡದಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಸ್ವಾಮಿ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಮಾನವ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರದೀಪ್, ಸಹ ಕಾರ್ಯದರ್ಶಿಗಳಾದ ಎಂ.ಎ.ಗೋಪಿ, ಎನ್.ಮಹೇಶ್ ಇತರರಿದ್ದರು.