

India vs Pakistan match: ನಾಳೆ ನಡೆಯುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಪ್ರತಿಭಟಿಸಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳನ್ನು ಕೇಂದ್ರವು ಅವಮಾನಿಸುತ್ತಿದೆ ಎಂದು ಎಎಪಿ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಪಾಕಿಸ್ತಾನದೊಂದಿಗೆ ಪಂದ್ಯವನ್ನು ಆಯೋಜಿಸುವ ಪ್ರಧಾನಿಯ ಅಗತ್ಯವೇನು? ಈ ಪಂದ್ಯ ನಡೆಯಬಾರದು ಎಂದು ಇಡೀ ದೇಶ ಹೇಳುತ್ತಿದೆ. ಹಾಗಾದರೆ ಈ ಪಂದ್ಯವನ್ನು ಏಕೆ ಆಯೋಜಿಸಲಾಗುತ್ತಿದೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ, ಇದೂ ಕೂಡ ಟ್ರಂಪ್ ಅವರ ಒತ್ತಡದಲ್ಲಿಯೇ ಆಗುತ್ತಿದೆಯೇ? ನೀವು ಟ್ರಂಪ್‌ಗೆ ಎಷ್ಟರ ಮಟ್ಟಿಗೆ ತಲೆಬಾಗುತ್ತೀರಿ? ಎಂದು ಕೇಜ್ರೀವಾಲ್ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಇನ್ನೋಬ್ಬ ಆಪ್ ಪಕ್ಷದ ನಾಯಕ ಭಾರದ್ವಾಜ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಪಾಕಿಸ್ತಾನದ ಕ್ರಿಕೆಟ್ ಆಟಗಾರರು ನಮ್ಮ ವಿಧವೆಯರನ್ನು ತುಂಬಾ ಕೊಳಕು, ಅಸಹ್ಯಕರ ರೀತಿಯಲ್ಲಿ ಅಪಹಾಸ್ಯ ಮಾಡುತ್ತಾರೆ. ನಾವು ಅವರೊಂದಿಗೆ ಕ್ರಿಕೆಟ್ ಆಡುತ್ತೇವೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆಗೇಡು ಎಂದು ತೀವ್ರ ವಾಗ್ದಾಳಿ ನಡೆಸಿದ್ಧಾರೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ, ಹೆಚ್ಚಾಗಿ ಪ್ರವಾಸಿಗರು ಸೇರಿದಂತೆ 26 ಜನರು ಸಾವನ್ನಪ್ಪಿದ ನಂತರ, ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಸಂಬಂಧವನ್ನು ಬಹಿಷ್ಕರಿಸಬೇಕೆಂಬ ಸಾರ್ವಜನಿಕವಾಗಿ ಕೇಳಿಬರುತ್ತಿವೆ.
ಸರ್ಕಾರದ ಹೊಸ ಕ್ರೀಡಾ ನೀತಿಯ ಪ್ರಕಾರ, ಭಾರತವು ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಪಂದ್ಯಗಳನ್ನು ಆಡುವುದಿಲ್ಲ. ಆದರೆ, ಏಷ್ಯಾ ಕಪ್ ಮತ್ತು ಐಸಿಸಿ ಈವೆಂಟ್‌ಗಳಂತಹ ಬಹುಪಕ್ಷೀಯ ಪಂದ್ಯಾವಳಿಗಳಲ್ಲಿ ಪಾಕ್ ಜತೆ ಎದುರಿಸುವುದನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. (ಏಜೆನ್ಸೀಸ್)