ಶ್ರೀಲಂಕಾದಲ್ಲಿ ಭಾರತ v/s ಚೀನಾ!; ಚೀನಾ ತಂತ್ರಕ್ಕೆ ಭಾರತದ ದಿಟ್ಟ ತಿರುಗೇಟು

Srilanka
Published on
ಚೀನಾ ತನ್ನ ವಿಸ್ತರಣಾನೀತಿಯ ಭಾಗವಾಗಿ, ಹಲವು ರಾಷ್ಟ್ರಗಳಿಗೆ ಸಹಾಯ ಮಾಡುವ ನೆಪದಲ್ಲಿ ಅವುಗಳನ್ನು ಸಾಲಗಾರ ರಾಷ್ಟ್ರಗಳಾಗಿ ಮಾಡಿರುವುದು ಗೊತ್ತಿರುವಂಥದ್ದೇ. ಅದರಲ್ಲೂ, ಭಾರತದ ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್​ನಲ್ಲಿ ಮೇಲುಗೈ ಸ್ಥಾಪಿಸಲು ಡ್ರಾ್ಯಗನ್ ರಾಷ್ಟ್ರ ಕೈಗೊಂಡ ಕ್ರಮಗಳು ಒಂದೆರಡಲ್ಲ. ಆದರೆ, ಶ್ರೀಲಂಕಾದಲ್ಲಿ ತನ್ನ ಪ್ರಾಬಲ್ಯ ಮರುಸ್ಥಾಪಿಸಲು ಭಾರತ ಕೆಲ ದಿಟ್ಟ ನಿರ್ಣಯಗಳನ್ನು ಕೈಗೊಂಡಿದ್ದು, ಆ ಕುರಿತಾದ ಮಾಹಿತಿ ಇಲ್ಲಿದೆ.

ಭಾರಿ ಸಾಲದ ಹೊರೆಯಲ್ಲಿ ಮುಳುಗಿರುವ, ವಿದೇಶಿ ವಿನಿಮಯದ ಕೊರತೆಯಿಂದ ಬಳಲಿರುವ ಶ್ರೀಲಂಕಾದ ಆಂತರಿಕ ಪರಿಸ್ಥಿತಿ ಈಗ ಅಯೋಮಯವಾಗಿದೆ. ಜೀವನಾವಶ್ಯಕ ವಸ್ತುಗಳು ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್, ಅಕ್ಕಿ, ಬೇಳೆ, ಹಾಲು... ಎಲ್ಲದರ ದರಗಳು ಗಗನಮುಖಿಯಾಗಿವೆ. ಇಂಥ ಸಂಕಷ್ಟದ ಹೊತ್ತಲ್ಲಿಯೂ ಶ್ರೀಲಂಕಾದ ಪಾಲಿಗೆ ಭರವಸೆ ಮೂಡಿಸುವ ಕೆಲವು ಬೆಳವಣಿಗೆಗಳು ಸಂಭವಿಸಿವೆ.

ಕೊಲಂಬೊದಲ್ಲಿ ಎಂಆರ್​ಸಿಸಿ: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಸಾಗರಯಾನ ರಕ್ಷಣಾ ಸಮನ್ವಯ ಕೇಂದ್ರವನ್ನು (ಎಂಆರ್​ಸಿಸಿ) ಸ್ಥಾಪಿಸಲು ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಶ್ರೀಲಂಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಂಬನ್​ತೋಟಾ ಬಂದರು ಪ್ರದೇಶದಲ್ಲಿ ಎಂಆರ್​ಸಿಸಿ ಉಪಕೇಂದ್ರ ಸ್ಥಾಪನೆಯಾಗಲಿದೆ. ಹಿಂದೂ ಮಹಾ ಸಾಗರದ ಮಾಲ್ಡೀವ್ಸ್ ನಲ್ಲಿ ರೇಡಾರ್ ವ್ಯವಸ್ಥೆಯನ್ನು ಅಳವಡಿಸಿದ ಬೆನ್ನಲ್ಲೇ, ಶ್ರೀಲಂಕಾದಲ್ಲಿ ಎಂಆರ್​ಸಿಸಿ ಆರಂಭಿಸುವ ಮೂಲಕ ಭಾರತವು ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಮರುಸ್ಥಾಪಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಅಲ್ಲದೆ, ಶ್ರೀಲಂಕಾದ ಜಾಫ್ನಾ ದ್ವೀಪದಲ್ಲಿ ಭಾರತ ಮೂರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಇದಕ್ಕೂ ಮುನ್ನ, ಎರಡು ವಿದ್ಯುತ್ ಯೋಜನೆಗಳನ್ನು ಭಾರತ ಇಲ್ಲಿ ಆರಂಭಿಸಿದೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವ ಜಿ.ಎಲ್.ಪೈರಿಸ್ ನಡುವೆ ನಡೆದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಸಂದರ್ಭದಲ್ಲಿ ಇನ್ನೂ ಕೆಲವು ಮಹತ್ವದ ಒಪ್ಪಂದಗಳು ಏರ್ಪಟ್ಟಿವೆ. ಶ್ರೀಲಂಕಾದಲ್ಲಿ ‘ಆಧಾರ್’ ಸ್ವರೂಪದ ವಿಶಿಷ್ಟ ಗುರುತಿನ ಕಾರ್ಯಕ್ರಮವನ್ನು ಆರಂಭಿಸಲು ಭಾರತ ನೆರವು ನೀಡಲಿದೆ. ಭಾರತವು ಶ್ರೀಲಂಕಾ ನೌಕಾಪಡೆಗೆ ಕರಾವಳಿ ಕಣ್ಗಾವಲು ಉದ್ದೇಶದ ಮೂರು ಡಾರ್ನಿಯರ್ ವಿಮಾನಗಳನ್ನು ನೀಡಲಿದೆ. ಶ್ರೀಲಂಕಾದ ಟ್ರಂಕಾಮಲೈ ಬಂದರಿಗಾಗಿ ಗೋವಾ ಶಿಪ್​ಯಾರ್ಡ್ ಲಿಮಿಟೆಡ್ ತೇಲುವ ಡಾಕ್ ನಿರ್ವಿುಸಿಕೊಡಲಿದೆ. ಚೀನಾ ಗುತ್ತಿಗೆ ಪಡೆದಿರುವ ಹಂಬನ್​ತೋಟಾ ಬಂದರು ಹೊರತುಪಡಿಸಿ ಬೇರೆ ಬಂದರುಗಳಿಗೆ ಈ ಡಾಕ್ ಅನ್ನು ತುರ್ತು ಸಂದರ್ಭಗಳಲ್ಲಿ ಬಳಸಬಹುದಾಗಿದೆ.

ಮಹತ್ವದ ಕ್ರಮ: ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಗಳಲ್ಲಿ ಚೀನಾ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವ ಮೂಲಕ, ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತ್ತು. ಶ್ರೀಲಂಕಾದ ಹಂಬನ್​ತೋಟಾ ಬಂದರು ಅಭಿವೃದ್ಧಿಪಡಿಸಿ, ಅದನ್ನು ಗುತ್ತಿಗೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಾಬಲ್ಯಕ್ಕೆ ಕೊಟ್ಟ ಹೊಡೆತ ಎಂದೇ ಪರಿಗಣಿಸಲಾಗಿತ್ತು. ಆದರೀಗ, ಭಾರತವು ಶ್ರೀಲಂಕಾ ಮತ್ತು ಮಾಲ್ಡೀವ್ಸ್​ನಲ್ಲಿ ಸಮುದ್ರಯಾನಕ್ಕೆ ಅಗತ್ಯವಾದ ವ್ಯವಸ್ಥೆಗಳ ಸ್ಥಾಪನೆಗೆ ಮುಂದಾಗುವ ಮೂಲಕ ಚೀನಾಗೆ ಸೆಡ್ಡು ಹೊಡೆದಿದೆ.

ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಜೈಶಂಕರ್

ಸಾಲದ ಸಂಕೋಲೆ: ಭಾರತ ಮತ್ತು ಶ್ರೀಲಂಕಾ ನಡುವೆ ಸಾಂಸ್ಕೃತಿಕ, ವ್ಯಾಪಾರ-ವಾಣಿಜ್ಯ ಸಂಬಂಧಗಳು ಮೊದಲಿನಿಂದಲೂ ಉತ್ತಮವಾಗಿಯೇ ಇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೀನಾದ ತಂತ್ರಗಾರಿಕೆಯಿಂದ ಲಂಕಾ ಭಾರತದ ಸ್ನೇಹದಿಂದ ದೂರ ಸರಿಯುತ್ತಿದೆ ಎಂಬುದು ವಾಸ್ತವ. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ 24 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಗುತ್ತಿಗೆ ಪಡೆದಿದೆ. ವಿಶೇಷವೆಂದರೆ ಅಷ್ಟೂ ಯೋಜನೆಗಳಿಗೆ ಸ್ವತಃ ಚೀನಾ ತನ್ನ ಬ್ಯಾಂಕ್​ಗಳಿಂದ ಸಾಲ ನೀಡಿದೆ.

ಶ್ರೀಲಂಕಾದಲ್ಲಿ ಡ್ರ್ಯಾಗನ್​ ಹೆಜ್ಜೆ
  • 1.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಕೊಲಂಬೋ ಪೋರ್ಟ್ ಸಿಟಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದನ್ನು ಚೀನಾ 99 ವರ್ಷಗಳ ಗುತ್ತಿಗೆಗೆ ಪಡೆಯಲಿದೆ. ಈ ಯೋಜನೆ ಜಾರಿಗೆಂದೇ ಶ್ರೀಲಂಕಾ ಸರ್ಕಾರ ಕಳೆದ ವರ್ಷ ‘ಕೊಲಂಬೋ ಪೋರ್ಟ್ ಸಿಟಿ ಇಕಾನಮಿಕ್ ಕಮಿಷನ್ ಆಕ್ಟ್’ ಎಂಬ ಕಾನೂನನ್ನು ಜಾರಿಗೆ ತಂದಿದೆ. ‘ಕೊಲಂಬೋ ಪೋರ್ಟ್ ಸಿಟಿಯನ್ನು ಸರ್ಕಾರ ಚೀನೀ ವಸಾಹತು ವನ್ನಾಗಿ ಮಾಡಹೊರಟಿದೆ’ ಎಂದು ವಿಪಕ್ಷಗಳು ಆರೋಪಿಸಿವೆ.
  • ಹಂಬನ್​ತೋಟಾ ಬಂದರನ್ನು ಚೀನಾಗೆ 99 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ. ಈ ಬಂದರನ್ನು ಕೈವಶ ಮಾಡಿಕೊಳ್ಳಲು ಚೀನಾ ರಹಸ್ಯ ಕಾರ್ಯಯೋಜನೆ ರೂಪಿಸಿ ಹಂತಹಂತವಾಗಿ ಅನುಷ್ಠಾನಗೊಳಿಸಿತ್ತು.
  • ಚೀನಾ ಸಾಲದಿಂದ ಮಟ್ಟಾಲದಲ್ಲಿ ವಿಮಾನನಿಲ್ದಾಣ ಸ್ಥಾಪನೆ. ಆದರೆ, ಈ ವಿಮಾನನಿಲ್ದಾಣದಿಂದ ಚೀನೀ ಸಾಲ ತೀರಿಸಲು ಅಗತ್ಯವಾದಷ್ಟು ಆದಾಯ ಬರದೇ ಶ್ರೀಲಂಕಾ ಇಕ್ಕಟ್ಟಿನಲ್ಲಿ ಸಿಲುಕಿದೆ.

ಟಿಎನ್​ಎ - ರಾಜಪಕ್ಸ ಮಾತುಕತೆ

ತಮಿಳು ನಾಗರಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ನಾಗರಿಕರ ಹಕ್ಕುಗಳನ್ನು ಖಾತ್ರಿಪಡಿಸಬೇಕು ಎಂದು ಶ್ರೀಲಂಕಾದ ಪ್ರಮುಖ ತಮಿಳು ಪಕ್ಷ ಟಿಎನ್​ಎ ಆಗ್ರಹಿಸಿದೆ. ತಮಿಳರು ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಮಿಳ್ ನ್ಯಾಷನಲ್ ಅಲಾಯನ್ಸ್ (ಟಿಎನ್​ಎ) ಪಕ್ಷದ ನಿಯೋಗದೊಂದಿಗೆ ಸಭೆ ನಡೆಸಿ, ರ್ಚಚಿಸಿದರು. ಸಂವಿಧಾನದ 13ನೇ ತಿದ್ದುಪಡಿ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಬೇಕು, ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು, ತಮಿಳರ ಸಮಸ್ಯೆಗಳನ್ನು ಬಗೆಹರಿಸ ಬೇಕು, ಅವರ ಹಿತ ಕಾಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟಿಎನ್​ಎ ನಾಯಕರು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಭಾರತ ಪ್ರತಿಕ್ರಿಯೆ: ತಮಿಳರ ಸಮಸ್ಯೆ ಕುರಿತಾದ ಮಾತುಕತೆ ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿತ್ತು. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಟಿಎನ್​ಎ ನಿಯೋಗದೊಂದಿಗೆ ಮಾತುಕತೆ ನಡೆಸಿರುವುದು ಸ್ವಾಗತಾರ್ಹ ಎಂದು ಭಾರತ ಹೇಳಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಟಿಎನ್​ಎ ನಿಯೋಗ, ರಾಜಪಕ್ಸ ಅವರೊಂದಿಗೆ ನಡೆದ ಚರ್ಚೆಯ ವಿವರಗಳನ್ನು ಹಂಚಿಕೊಂಡಿದೆ.

ದಿನಕ್ಕೆ 10 ಗಂಟೆ ವಿದ್ಯುತ್ ಪೂರೈಕೆ ಸ್ಥಗಿತ

ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾದ ಸಂಕಷ್ಟ ಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದಾದ್ಯಂತ ವಿದ್ಯುತ್ ಪೂರೈಕೆಯನ್ನು 7-10 ಗಂಟೆಗಳ ಕಾಲ ಸ್ಥಗಿತಗೊಳಿಸುವ ಕ್ರಮವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯರು ರಾತ್ರಿಯ ಹೊತ್ತಲ್ಲಿ ಕತ್ತಲಲ್ಲೇ ಕಳೆಯಬೇಕಾಗಿದೆ. ಜಲಜನಕ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನ ಲಭ್ಯವಾಗುತ್ತಿಲ್ಲ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಈ ಅನಿವಾರ್ಯ ನಿರ್ಣಯಕ್ಕೆ ಬರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಕಳೆದ ಒಂದು ತಿಂಗಳಿಂದ ಶ್ರೀಲಂಕಾದಲ್ಲಿ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇಂಧನದ ಕೊರತೆಯೂ ಕಾಡುತ್ತಿದ್ದು, ಪೆಟ್ರೋಲ್, ಡೀಸೆಲ್ ಪಂಪ್​ಗಳಲ್ಲಿ ಜನರ ಸರತಿಸಾಲಿನಲ್ಲಿ ನಿಂತಿದ್ದಾರೆ. ಅಹಿತಕರ ಘಟನೆಗಳನ್ನು ತಡೆಯಲು ಕೆಲವೆಡೆ ಪೆಟ್ರೋಲ್ ಪಂಪ್​ಗಳಲ್ಲಿ ಸೇನಾ ತುಕಡಿಯನ್ನು ನಿಯೋಜಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆಯೂ ಏರಿರುವ ಪರಿಣಾಮ, ಶ್ರೀಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದೇಶಿ ವಿನಿಮಯದ ತೀವ್ರ ಕೊರತೆಯೇ ಈ ಸಮಸ್ಯೆಗಳಿಗೆ ಕಾರಣವಾಗಿದ್ದು, ‘ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಸರ್ಕಾರ ಆಶ್ವಾಸನೆ ನೀಡಿದೆ.

ಲಂಕಾ ತೊಳಲಾಟ

ಶ್ರೀಲಂಕಾ ಸದ್ಯ ಭಾರಿ ಬಿಕ್ಕಟ್ಟು ಎದುರಿಸುತ್ತಿದ್ದು, ಜನಜೀವನ ದುರ್ಭರವಾಗಿದೆ. ಅಲ್ಲಿನ ದಯನೀಯ ಚಿತ್ರಣ ಹೀಗಿದೆ.
  • ಕರೊನಾ ಹಾವಳಿಗಿಂತ ಮುನ್ನವೇ ಶ್ರೀಲಂಕಾದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಕರೊನಾ ಲಾಕ್​ಡೌನ್ ಪರಿಣಾಮವಾಗಿ ಪರಿಸ್ಥಿತಿ ವಿಷಮಿಸಿತು. ವಿದೇಶಿ ವಿನಿಮಯ ತೀವ್ರ ಇಳಿದಿದ್ದರಿಂದಾಗಿ ಅಗತ್ಯ ಆಹಾರವಸ್ತುಗಳು ಮತ್ತು ಇಂಧನವನ್ನು ಆಮದು ಮಾಡಿಕೊಳ್ಳಲು ಸಹ ಆಗುತ್ತಿಲ್ಲ.
  • ಪ್ರವಾಸೋದ್ಯಮವು ಲಂಕಾದ ಮುಖ್ಯ ಆದಾಯಮೂಲಗಳಲ್ಲಿ ಒಂದು. ಆದರೆ ಕರೊನಾ ಕಾರಣಕ್ಕೆ ಪ್ರವಾಸಿಗರು ಬರುವುದು ಕಡಿಮೆಯಾಗಿ ಆದಾಯಕ್ಕೆ ಹೊಡೆತ ಬಿತ್ತು. ಇದಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಲಂಕನ್ನರು ಸ್ವದೇಶಕ್ಕೆ ಕಳಿಸುವ ಹಣದ ಪ್ರಮಾಣ ಸಹ ತೀವ್ರವಾಗಿ ಕುಸಿದಿದೆ.
  • ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಪೇಪರ್ ಮತ್ತು ಶಾಯಿಯ ಕೊರತೆಯಿಂದಾಗಿ ದೇಶದಲ್ಲಿ ಅನೇಕ ಪರೀಕ್ಷೆಗಳನ್ನೇ ಮುಂದೂಡಲಾಗಿದ್ದು, ಲಕ್ಷಾಂತರ ಮಕ್ಕಳು ಆತಂಕದಲ್ಲಿದ್ದಾರೆ.
  • ಉದ್ಯೋಗನಷ್ಟ ಶ್ರೀಲಂಕಾ ಜನರನ್ನು ಕಂಗೆಡಿಸಿದೆ. ದೇಶದಲ್ಲಿ 50 ಲಕ್ಷ ಕುಟುಂಬಗಳು ಕಡಿಮೆ ಆದಾಯದ ವ್ಯಾಪ್ತಿಯಲ್ಲಿವೆ ಎಂದು ಸರ್ಕಾರ ಗುರುತಿಸಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ತಲಾ 5 ಸಾವಿರ ರೂ. ನೆರವು ನೀಡಿತ್ತು. ಆದರೆ ಈಗ ರಷ್ಯಾ-ಯೂಕ್ರೇನ್ ಸಮರದ ಪರಿಣಾಮವಾಗಿ ಇಂಧನ ದರ ಏರಿ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ಶ್ರೀಲಂಕಾದಲ್ಲಿ ಶೇ.40ರಷ್ಟು ವಿದ್ಯುತ್ತಿಗೆ ಜಲಮೂಲಗಳನ್ನು ಅವಲಂಬಿಸಲಾಗಿದೆ. ಆದರೆ ಈ ಸಲ ಮಳೆ ಕೊರತೆಯಿಂದಾಗಿ ಬಹುತೇಕ ಜಲಾಶಯಗಳಲ್ಲಿ ನೀರಿನ ತುಟಾಗ್ರತೆಯಿದೆ. ಇನ್ನೊಂದೆಡೆ, ಅಗತ್ಯದಷ್ಟು ಇಂಧನವನ್ನು ಸಹ ತರಿಸಲು ಆಗುತ್ತಿಲ್ಲ. ಇದು ಸಾಲದೆಂಬಂತೆ, ಕಲ್ಲಿದ್ದಲು ಆಮದು ಸಹ ತೀವ್ರವಾಗಿ ಕುಸಿದಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ತಗ್ಗಿದೆ.
  • ಶ್ರೀಲಂಕಾವು 51 ಬಿಲಿಯನ್ ಡಾಲರ್ ವಿದೇಶಿ ಸಾಲದ ಹೊರೆ ಹೊಂದಿದ್ದು, ಕೆಲಮಟ್ಟಿಗಾದರೂ ಮರುಪಾವತಿಗೆ ಅನುಕೂಲವಾಗಲೆಂದು ಶ್ರೀಲಂಕಾ ಸರ್ಕಾರ 2020ರ ಮಾರ್ಚ್​ನಲ್ಲಿ ಅನೇಕ ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಿತು. ಆದರೆ ಇದರಿಂದ ಅಗತ್ಯ ವಸ್ತುಗಳ ತುಟಾಗ್ರತೆ ಉಂಟಾಗಿ ಬೆಲೆ ಯದ್ವಾತದ್ವಾ ಏರಿತು. ಹೀಗಾಗಿ ಹಣದುಬ್ಬರವೂ ಹೆಚ್ಚಿತು. ಈ ಸನ್ನಿವೇಶದಲ್ಲಿ ಜನರು ಕಡಿಮೆ ಬೆಲೆಯ ವಸ್ತುಗಳ ಖರೀದಿಗೆ ಮೊರೆಹೋದರು ಹಾಗೂ ಮನರಂಜನೆ ಖರ್ಚನ್ನು ಬಹುತೇಕ ನಿಲ್ಲಿಸಿದರು. ಕಳೆದ ಅಕ್ಟೋಬರ್​ನಲ್ಲಿ ಒಂದು ಲೋಟ ಚಹಾ ದರ 25 ರೂ. ಇದ್ದರೆ ಈಗ 100 ರೂ.ಗೆ ಏರಿದೆ! ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ನಸುಕಿನಲ್ಲಿಯೇ ಉದ್ದುದ್ದ ಸಾಲುಗಳು ದೇಶದ ಅನೇಕ ಕಡೆಗಳಲ್ಲಿ ಸಾಮಾನ್ಯವಾಗಿವೆ.
  • ವೈದ್ಯಕೀಯ ವೆಚ್ಚ ಏರಿದ್ದರಿಂದಾಗಿ ಅನೇಕ ಜನರು ಸ್ವಯಂ ಔಷಧಕ್ಕೆ ಮೊರೆಹೋಗಿದ್ದು, ಇದರಿಂದ ಅನ್ಯಕಾಯಿಲೆಗಳುಳ್ಳವರಿಗೆ (ಕೊ-ಮಾರ್ಬಿಡಿಟಿ) ತೊಂದರೆಯಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
  • ಶ್ರೀಲಂಕಾದ ಸೆಂಟ್ರಲ್ ಬ್ಯಾಂಕು ಕರೆನ್ಸಿ ಮೌಲ್ಯವನ್ನು ಶೇ.15ರಷ್ಟು ತಗ್ಗಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net