

ನವದೆಹಲಿ: ಭಾರತ ಮತ್ತು ಅಮೆರಿಕದ ಅಧಿಕಾರಿಗಳು ಏಪ್ರಿಲ್ 23ರಿಂದ ವಾಷಿಂಗ್ಟನ್ನಲ್ಲಿ 3 ದಿನಗಳ ಕಾಲ ವ್ಯಾಪಾರ ತೆರಿಗೆ ಒಪ್ಪಂದ ಕುರಿತು ಮಾತುಕತೆ ನಡೆಸಲಿದ್ದು, ಈ ಚರ್ಚೆಗಾಗಿ 19 ನಿರ್ದಿಷ್ಟ ವಿಷಯಗಳನ್ನು ಗುರುತಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎರಡೂ ರಾಷ್ಟ್ರಗಳ ನಡುವೆ ತೆರಿಗೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಅನುಮಾನಗಳು ಈ ಸಭೆಯಲ್ಲಿ ಬಗೆಹರಿಯಲಿದ್ದು, ಕೊನೆಯಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಏರ್ಪಡಲಿದೆ. ಪರಸ್ಪರ ತೆರಿಗೆಗೆ ಅಮೆರಿಕ 90 ದಿನಗಳ ವಿರಾಮ ಘೊಷಿಸಿದ್ದು, ಅಷ್ಟರೊಳಗೆ ಈ ಒಪ್ಪಂದಕ್ಕೆ ಒಂದು ಅಂತಿಮರೂಪ ಸಿಗಲಿದೆ. ಎರಡೂ ರಾಷ್ಟ್ರಗಳಿಗೆ ಲಾಭವಾಗುವಂತಹ ಅಂಶಗಳು ಒಪ್ಪಂದದಲ್ಲಿ ಇರಲಿವೆ. ಭಾರತ ತಂಡದ ನೇತೃತ್ವವನ್ನು ಮುಖ್ಯ ಸಮಾಲೋಚಕ, ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ವಹಿಸಲಿದ್ದಾರೆ. ಅಗರ್ವಾಲ್ ಅವರನ್ನು ವಾಣಿಜ್ಯ ಸಚಿವಾಲಯದ ಮುಂದಿನ ಕಾರ್ಯದರ್ಶಿಯನ್ನಾಗಿ ಶುಕ್ರವಾರವಷ್ಟೆ ನೇಮಿಸಲಾಗಿದ್ದು, ಅ. 1ರಿಂದ ಕಾರ್ಯಾರಂಭ ಮಾಡಲಿದ್ದಾರೆ. ಅಮೆರಿಕದ ಅಧಿಕಾರಿಗಳ ತಂಡ ಇತ್ತೀಚೆಗೆ ಭಾರತಕ್ಕೆ ಆಗಮಿಸಿ ಹಲವು ದಿನಗಳ ಕಾಲ ಸಮಾಲೋಚಿಸಿ ವಾಪಸ್ ಹೋಗಿದೆ. ಕೆಲವು ಕೈಗಾರಿಕಾ ಸರಕುಗಳು, ವಾಹನಗಳು (ವಿಶೇಷವಾಗಿ ಎಲೆಕ್ಟ್ರಿಕ್ ವೆಹಿಕಲ್ಸ್), ವೈನ್, ಪೆಟ್ರೊಕೆಮಿಕಲ್ಸ್, ಕೃಷಿ- ಹೈನು ಉತ್ಪನ್ನಗಳು, ಸೇಬು ಮುಂತಾದವುಗಳಿಗೆ ಅಮೆರಿಕವು ತೆರಿಗೆ ಕಡಿತ ಬಯಸುತ್ತಿದೆ. ಪ್ರತಿಯಾಗಿ ಸಿದ್ಧ ಉಡುಪು, ಆಭರಣ, ಚಮೋತ್ಪನ್ನ, ಪ್ಲಾಸ್ಟಿಕ್, ರಾಸಾಯನಿಕ, ಎಣ್ಣೆಬೀಜ, ಸೀಗಡಿ, ತೋಟಗಾರಿಕೆ ಉತ್ಪನ್ನಗಳ ಮೇಲೆ ಭಾರತವು ತೆರಿಗೆ ಇಳಿಕೆ ಕೇಳುತ್ತಿದೆ ಎಂದು ಮೂಲಗಳು ವಿವರಿಸಿವೆ.