

ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಮುಂದಿನ 6 ತಿಂಗಳಲ್ಲಿ ಬದಲಾವಣೆ ಮಾಡಲಾಗುತ್ತದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಸೇರಿ ಹೊಸ ತಂತ್ರಜ್ಞಾನಗಳನ್ನು ಸರ್ಕಾರ ಪರಿಚಯಿಸಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ವಾಹನಗಳಿಗೆ ಶುಲ್ಕ ವಿಧಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ; ಸಿಎಂ ಬೊಮ್ಮಾಯಿ
ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಎನ್ಎಚ್ಎಐಗೆ ಪ್ರಸ್ತುತ ಟೋಲ್ ಸಂಗ್ರಹದಿಂದ 40,000 ಕೋಟಿ ರೂ. ವಾರ್ಷಿಕ ಆದಾಯ ಬರುತ್ತಿದೆ. ಇದು 2,3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ ಆಗಲಿದೆ ಎಂದರು.
ದೇಶದಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ, ಇನ್ನಿತರ ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತರಲು ಸರ್ಕಾರ ಉತ್ಸುಕವಾಗಿದೆ. ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಡೆಸುತ್ತಿದೆ. ನಂಬರ್ ಪ್ಲೇಟ್ ರೆಕಗ್ನಿಷನ್ ಸಿಸ್ಟಂ ಅಡಿ ಇದು ಕೆಲಸ ಮಾಡುತ್ತದೆ. ನಂಬರ್ ಪ್ಲೇಟ್ಗಳನ್ನು ಕ್ಯಾಮೆರಾಗಳು ರೀಡ್ ಮಾಡಿ, ಸ್ವಯಂಚಾಲಿತವಾಗಿ ಟೋಲ್ ಕಡಿತವಾಗುತ್ತದೆ. 2018-19ನೇ ಸಾಲಿನಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳಿಗೆ ಕಾಯುವ ಸರಾಸರಿ ಸಮಯ 8 ನಿಮಿಷವಾಗಿತ್ತು. 2021-22ರ ಅವಧಿಯಲ್ಲಿ ಇದು 47 ಸೆಕೆಂಡುಗಳಿಗೆ ಇಳಿದಿದೆ. ಫಾಸ್ಟ್ಯಾಗ್ ಅಳವಟಿಕೆಯಿಂದ ಇದು ಸಾಧ್ಯವಾಗಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್ಟೇಬಲ್ ಆಯ್ಕೆ