

ಕೊಳ್ಳೇಗಾಲ: ಸ್ವಾತಂತ್ರ್ಯ, ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಕೈಕಟ್ಟಿ ಕೂರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಆತಂಕವಾದಿಗಳಿಗೆ ಹಾಗೂ ವಿಶ್ವಕ್ಕೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಭಾರತ ತೋರಿಸಿದೆ ಎಂದು ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಹೇಳಿದರು.
ಪಾಕಿಸ್ತಾನದ ನೆರವಿನಿಂದ ಭಾರತದಲ್ಲಿ ಆತಂಕವಾದಿ ಚಟುವಟಿಕೆ ನಡೆಸುತ್ತಿರುವ ಆತಂಕವಾದಿಗಳನ್ನು ಹಾಗೂ ಅವರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ಸೇನೆ ಮೇ 6ರ ಮಧ್ಯರಾತ್ರಿಯ ನಂತರ ನಡೆಸಿರುವ ಸೇನಾ ಕಾರ್ಯಾಚರಣೆಯೇ ಆಪರೇಷನ್ ಸಿಂಧೂರ್. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರ್ ಇ ತೋಯ್ಬ, ಜೈಷ್ ಎ ಮೊಹಮ್ಮದ್, ಹಿಜ್ಜುಲ್ ಮುಜಾಹಿದೀನ್ ಇವೇ ಮುಂತಾದ ಆತಂಕವಾದಿ ಸಂಘಟನೆಗಳ ಅಡಗು ತಾಣಗಳನ್ನು, ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಲು ಭಾರತ ಕೈಗೊಂಡಿರುವ ಕಾರ್ಯಾಚರಣೆ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಂತಿ ಪ್ರಿಯ, ರಾಷ್ಟ್ರವಾದ ಭಾರತದಲ್ಲಿ ಆತಂಕವಾದದ ಮೂಲಕ ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಆತಂಕ ವಾದಿಗಳನ್ನು, ಅವರ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ದೃಢ ನಿರ್ಧಾರವನ್ನು ಭಾರತ ಈಗ ಕೈಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಏ.22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆಗೈದು ಅನೇಕ ಹೆಣ್ಣು ಮಕ್ಕಳನ್ನು ವಿಧವೆಯರನ್ನಾಗಿಸಿದ ಆತಂಕವಾ ದಿಗಳನ್ನು ನಿರ್ನಾಮ ಮಾಡಲು, ಹೆಣ್ಣು ಮಕ್ಕಳ ರಕ್ಷಣೆಗೆ ಭಾರತ ಸದಾ ಸಿದ್ಧವೆಂದು ತೋರಿಸಿದೆ ಎಂದು ತಿಳಿಸಿದ್ದಾರೆ.