

ನವದೆಹಲಿ: ಪರಿಣಾಮಕಾರಿ ವೆಚ್ಚದ ಯಶಸ್ವಿ ಬಾಹ್ಯಾಕಾಶ ಯೋಜನೆಗಳ ಮೂಲಕ ಭಾರತ ಈಗಾಗಲೇ ಪ್ರಪಂಚದಲ್ಲಿ ಮುಂಚೂಣಿಯಲ್ಲಿದ್ದು, ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತವನ್ನು ಜಾಗತಿಕ ಬಾಹ್ಯಾಕಾಶ ಶಕ್ತಿ ಎಂಬುದಾಗಿ ಬಣ್ಣಿಸಿದ್ದಾರೆ. ಮಾಸಿಕ ರೇಡಿಯೊ ಕಾರ್ಯಕ್ರಮವಾದ 121ನೇ ‘ಮನ್ ಕೀ ಬಾತ್’ನಲ್ಲಿ ಭಾನುವಾರ ಮಾತನಾಡಿದ ಅವರು, ಬಾಹ್ಯಾಕಾಶ ಸ್ಟಾರ್ಟಪ್ನಲ್ಲಿ ಹಲವು ಯುವಕರು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ.
ಹತ್ತು ವರ್ಷಗಳ ಹಿಂದೆ ಬಾಹ್ಯಾಕಾಶ ಸ್ಟಾರ್ಟಪ್ ಕ್ಷೇತ್ರದಲ್ಲಿ ದೇಶದಲ್ಲಿ ಒಂದೇ ಕಂಪನಿ ಇದ್ದಿದ್ದು, ಇದೀಗ 325ಕ್ಕೂ ಅಧಿಕ ಕಂಪನಿಗಳಿವೆ ಎಂದು ತಿಳಿಸಿದರು. ಶ್ರೇಷ್ಠ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಕೆ.ಕಸ್ತೂರಿರಂಗನ್ ಅವರನ್ನು ದೇಶ ಎರಡು ದಿನಗಳ ಹಿಂದೆಯಷ್ಟೇ ಕಳೆದುಕೊಂಡಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ ಮೋದಿ, ತಾವು ಕಸ್ತೂರಿರಂಗನ್ ಅವರನ್ನು ಭೇಟಿ ಆಗಿದ್ದಾಗೆಲ್ಲ ಭಾರತೀಯ ಯುವ ಪ್ರತಿಭೆ, ಆಧುನಿಕ ಶಿಕ್ಷಣ ಹಾಗೂ ಬಾಹ್ಯಾಕಾಶ ವಿಜ್ಞಾನಗಳ ಕುರಿತು ಮಾತನಾಡುತ್ತಿದ್ದೆವು ಎಂದು ತಿಳಿಸಿದರು. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಇಸ್ರೋ ಹೊಸ ಎತ್ತರಕ್ಕೆ ತಲುಪಿದ್ದು, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ, ಶಿಕ್ಷಣ, ವಿಜ್ಞಾನ ಮತ್ತೊಂದು ಮಜಲಿಗೆ ತಲುಪುವಲ್ಲಿನ ಅವರ ಕೊಡುಗೆ ಸ್ಮರಣೀಯ ಎಂದು ಮೋದಿ ಹೇಳಿದರು. ಕಸ್ತೂರಿರಂಗನ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆದ ಬಾಹ್ಯಾಕಾಶ ಕಾರ್ಯಕ್ರಮಗಳು ಭಾರತದ ಪ್ರಯತ್ನಗಳಿಗೆ ಜಾಗತಿಕ ಗುರುತನ್ನು ತಂದುಕೊಟ್ಟಿವೆ ಎಂದು ಪ್ರಧಾನಿ ತಿಳಿಸಿದರು.