

ನವದೆಹಲಿ: ಕರೊನಾ ವೈರಸ್ ಪ್ರಸರಣವಾಗುತ್ತಿರುವ ವೇಗ ಹೆಚ್ಚಿದೆ. ಕಾಯಿಲೆಗೆ ಔಷಧವಿಲ್ಲ, ಅನೇಕರು ಒಂದೇ ಸಮ ಸೋಂಕಿಗೆ ತುತ್ತಾಗುತ್ತಿರುವುದರಿಂದ ವೈದ್ಯಕೀಯ ಉಪಕರಣಗಳು, ಸವಲತ್ತುಗಳೂ ಕೂಡ ಸಾಕಾಗುತ್ತಿಲ್ಲ.
ಸದ್ಯದ ಮಟ್ಟಿಗೆ ಪ್ರತಿಯೊಬ್ಬರ ಆದ್ಯತೆ. ಭಾರತದಲ್ಲೂ ಸಹ ಮಾಸ್ಕ್, ಸ್ಯಾನಿಟೈಸರ್ಗಳಂತಹ ರಕ್ಷಣಾ ಸಾಧನಗಳು ಸಿಗುತ್ತಿಲ್ಲ. ವೈದ್ಯಕೀಯ ಉಪಕರಣಗಳಂತೂ ಎಷ್ಟಿದ್ದರೂ ಬೇಕು ಎಂಬ ಸ್ಥಿತಿ ಇದೆ.
ಹೀಗಿರುವಾಗ ಭಾರತ 90 ಟನ್ಗಳಷ್ಟು ವೈದ್ಯಕೀಯ ಉಪಕರಣಗಳು ಮತ್ತು ಸುರಕ್ಷತಾ ಸಾಧನಗಳನ್ನು ಮಾ.29ರಂದು ರಫ್ತು ಮಾಡಿದೆ.
ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಾಲಯದ ಸರ್ಬಿಯಾದಲ್ಲಿರುವ ಕಚೇರಿ(ಯುಎನ್ಡಿಪಿ) ಟ್ವೀಟ್ ಮಾಡಿದ್ದು, 90 ಟನ್ಗಳಷ್ಟು ವೈದ್ಯಕೀಯ ಉಪಕರಣಗಳನ್ನು ಹೊತ್ತ ಎರಡನೇ ಕಾರ್ಗೋ ಬೋಯಿಂಗ್ 747 ವಿಮಾನ ಸರ್ಬಿಯಾದಲ್ಲಿ ಇಂದು ಲ್ಯಾಂಡ್ ಆಗಿದೆ. ಭಾರತದ ಸಾಗಣೆಯಾದ ಸಾಧನ, ಉಪಕರಣಗಳು ಸರ್ಬಿಯಾ ಸರ್ಕಾರದಿಂದ ಸ್ವೀಕರಿಸಲ್ಪಟ್ಟಿವೆ. ಅದಕ್ಕೆ ಯುರೋಪಿಯನ್ ಒಕ್ಕೂಟ ಸಂಪೂರ್ಣ ಹಣವನ್ನೂ ನೀಡಿದೆ ಎಂದು ಮಾ.29ರಂದು ಟ್ವೀಟ್ ಮಾಡಿದೆ.
ವೈದ್ಯಕೀಯ ಉಪಕರಣಗಳೊಂದಿಗೆ 50 ಟನ್ಗಳಷ್ಟು ಸರ್ಜಿಕಲ್ ಕೈಗವಸುಗಳಿವೆ. ಮಾಸ್ಕ್ಗಳು, ಸಂಪೂರ್ಣ ದೇಹವನ್ನು ಮುಚ್ಚುವ ಸಡಿಲ ಮೇಲುಡುಪುಗಳು ಇವೆ ಎನ್ನಲಾಗಿದೆ.
ಹಾಗೇ ಅದೇ ದಿನ 35 ಲಕ್ಷ ಲೆಟಿಕ್ಸ್ ಶಸ್ತ್ರಚಿಕಿತ್ಸಾ ಕೈಗವಸುಗಳನ್ನು ಕೊಚ್ಚಿನ್ ಬಂದರಿನಿಂದ ಸರ್ಬಿಯಾ ರಾಜಧಾನಿ ಬೆಲ್ಗ್ರೇಡ್ಗೆ ರವಾನಿಸಲಾಗಿದೆ ಎಂದು ಏರ್ಪೋರ್ಟ್ ಮೂಲಗಳು ತಿಳಿಸಿವೆ.
ಸರ್ಬಿಯಾಕ್ಕೆ ವೈದ್ಯಕೀಯ ಉಪಕರಣಗಳು ಮತ್ತು ರಕ್ಷಣಾ ಸಾಧನಗಳನ್ನು ರಫ್ತು ಮಾಡಿದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರೊನಾ ವಿರುದ್ಧ ಹೋರಾಟಕ್ಕೆ ಅಗತ್ಯವಾದ ವಸ್ತುಗಳ ಸಂಗ್ರಹ ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ಆಮದು ಮಾಡಿಕೊಳ್ಳುವುದು ಸದ್ಯದ ಆದ್ಯತೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ತಿಳಿಸಿದ್ದಾರೆ.
ಭಾರತದ ಸುಮಾರು 100 ವೈದ್ಯರು ಇದೀಗ ಕ್ವಾರಂಟೈನ್ನಲ್ಲಿ ಇದ್ದಾರೆ. ಅವರೆಲ್ಲ ಯಾವುದೇ ರಕ್ಷಣಾ ಸಾಧನಗಳನ್ನು ಧರಿಸದೆ ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡಿದ್ದರು. (ಏಜೆನ್ಸೀಸ್)