

ಲಂಡನ್: ಆರ್ಥಿಕ ಅಪರಾಧಗಳಲ್ಲಿ ಭಾರತಕ್ಕೆ ಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ ಮತ್ತು ನೀರವ್ ಮೋದಿಯನ್ನು ಆದಷ್ಟು ಬೇಗ ಗಡಿಪಾರು ಮಾಡುವಂತೆ ಬ್ರಿಟನ್ಗೆ ಭಾರತ ಮನವಿ ಮಾಡಿದೆ.
ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಬಗ್ಗೆ ಚರ್ಚೆಯಾಗಿದೆ. ಯುರೋಪ್ನ ಮೂರು ದೇಶಗಳ ಪ್ರವಾಸದ ಕೊನೆಯ ಹಂತದಲ್ಲಿ ಮಂಗಳವಾರ ಲಂಡನ್ಗೆ ಭೇಟಿ ನೀಡಿದ್ದ ಶ್ರಿಂಗ್ಲಾ, ಅಧಿಕಾರಿಗಳು ಹಾಗೂ ಪಟೇಲ್ ಸಹಿತ ಬ್ರಿಟನ್ನ ಹಲವು ಸಚಿವರೊಂದಿಗೆ ರ್ಚಚಿಸಿದರು. ಇಬ್ಬರೂ ಉದ್ಯಮಿಗಳ ಗಡಿಪಾರಿಗೆ ಭಾರತ ಎದುರು ನೋಡುತ್ತಿದೆ.
ಭಾರತದಲ್ಲಿ ಅವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕಾಗಿದೆ ಎಂದು ಶ್ರಿಂಗ್ಲಾ ಹೇಳಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರ ನಡೆದಿರುವುದರಿಂದ (ಬ್ರೆಕ್ಸಿಟ್) ಭಾರತ ಮತ್ತು ಬ್ರಿಟನ್ ನಡುವಣ ಬಾಂಧವ್ಯವನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ ಎಂದು ಶ್ರಿಂಗ್ಲಾ ಪ್ರತಿಪಾದಿಸಿದ್ದಾರೆ. ಕಿಂಗ್ಫಿಷರ್ ಏರ್ಲೈನ್ಸ್ನ ಮಾಜಿ ಮುಖ್ಯಸ್ಥ ಮಲ್ಯರ ಗಡಿಪಾರು ಕುರಿತ ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿದಿವೆ. ವಜ್ರೋದ್ಯಮಿ ನೀರವ್ ಮೋದಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.