ತಗ್ಗಿತು ಕರೊನಾ ಸೋಂಕು; ಕಳೆದ ಮೂರು ತಿಂಗಳ ಅಬ್ಬರಕ್ಕೆ ಬಿದ್ದಿದೆ ಬ್ರೇಕ್​ !

Coronavirus
Published on

ನವದೆಹಲಿ: ದೇಶಕ್ಕೆ ಕರೊನಾ ಕಾಲಿಟ್ಟು ಏಳು ತಿಂಗಳಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 80 ಲಕ್ಷದ ಸಮೀಪದಲ್ಲಿದೆ. ಕಳೆದ 24ಗಂಟೆಯಲ್ಲಿ 45,149 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಹೊಸ ಕರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿನ ಪ್ರಮಾಣ ತಗ್ಗಿರುವ ಲಕ್ಷಣ ಎಂದು ಹೇಳಲಾಗುತ್ತಿದೆ.

ಹಾಗೇ ಒಂದು ದಿನದಲ್ಲಿ 480 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 1,19,014ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 79,09,960ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 59,105 ಮಂದಿ ಚೇತರಿಸಿಕೊಂಡು ಡಿಸ್​​ಚಾರ್ಜ್​ ಆಗಿದ್ದಾರೆ. ಅಲ್ಲಿಗೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳು ಕೇವಲ 6,53,717. ಹಾಗೂ ಗುಣಮುಖರಾದವರ ಸಂಖ್ಯೆ 71,37,229 ಎಂದು ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಸೆಪ್ಟೆಂಬರ್​ಗೆ ಹೋಲಿಸಿದರೆ ಇದೀಗ ಒಂದು ದಿನದಲ್ಲಿ ಪತ್ತೆಯಾಗುವ ಹೊಸ ಪ್ರಕರಣದ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದಲ್ಲಿ ಒಂದು ದಿನದಲ್ಲಿ 90 ಸಾವಿರಕ್ಕೂ ಹೆಚ್ಚು ಕರೊನಾ ಕೇಸ್​ಗಳು ಪತ್ತೆಯಾಗುತ್ತಿದ್ದವು. ಇದೀಗ 45,000ಕ್ಕೆ ಇಳಿದಿದ್ದು, ಸೋಂಕಿನ ಪ್ರಮಾಣ ಇನ್ನೂ ತಗ್ಗಲಿದೆ ಎಂದು ಹೇಳಲಾಗಿದೆ.

ಹಾಗೇ ಇನ್ನೊಂದು ಸಮಾಧಾನಕರ ಸಂಗತಿಯೆಂದರೆ ಭಾರತದಲ್ಲಿ ಕರೊನಾದಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ.90ಕ್ಕೆ ಏರಿದೆ. ದೇಶದಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು ಒಂದು ಮೈಲಿಗಲ್ಲು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net