ಕಳೆದ 24 ಗಂಟೆಗಳಲ್ಲಿ 3,016 ಹೊಸ ಕೋವಿಡ್​ ಪ್ರಕರಣ ಪತ್ತೆ, 14 ಮಂದಿ ಸಾವು: 6 ತಿಂಗಳಲ್ಲೇ ಗರಿಷ್ಠ

Covid Cases
Published on

ನವದೆಹಲಿ: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 3,016 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆಗೆ ಹೋಲಿಕೆ ಮಾಡಿದರೆ ಕರೊನಾ ಪ್ರಕರಣಗಳಲ್ಲಿ ಶೇ. 40 ಏರಿಕೆ ಕಂಡಿದೆ. ಕಳೆದ 6 ತಿಂಗಳಲ್ಲೇ ಇದು ಗರಿಷ್ಠ ಪ್ರಮಾಣವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೈನಂದಿನ ಪಾಸಿಟಿವಿಟಿ ದರವು ಶೇ. 2.7 ಮತ್ತು ವಾರದ ಪಾಸಿಟಿವಿಟಿ ದರವು ಶೇ. 1.71 ದಾಖಲಾಗಿದೆ.

14 ಸಾವುಗಳೊಂದಿಗೆ ದೇಶದ ಕರೊನಾ ಸಾವಿನ ಪ್ರಕರಣಗಳ ಸಂಖ್ಯೆ 5,30,862ಕ್ಕೆ ಏರಿಕೆಯಾಗಿದೆ. 14 ಸಾವುಗಳಲ್ಲಿ ಮಹಾರಾಷ್ಟ್ರದಿಂದ 3, ದೆಹಲಿಯಿಂದ 2, ಹಿಮಾಚಾಲ ಪ್ರದೇಶದಿಂದ 1 ಮತ್ತು ಕೇಳರದಿಂದ 8 ಸಾವುಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕು ಪ್ರಕರಣಗಳಲ್ಲಿ 0.03 ಪ್ರತಿಶತವನ್ನು ಒಳಗೊಂಡಿವೆ. ರಾಷ್ಟ್ರೀಯ COVID-19 ಚೇತರಿಕೆ ದರವು 98.78 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ವೆಬ್‌ಸೈಟ್ ತಿಳಿಸಿದೆ.

ಈ ವಾರ ಕೋವಿಡ್ ಪ್ರಕರಣಗಳಲ್ಲಿ ಆಘಾತಕಾರಿ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳು ತುರ್ತು ಸಭೆಗಳನ್ನು ನಡೆಸಲು ಯೋಜಿಸಿವೆ. ಜನವರಿ 16 ರಂದು ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 300 ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ದೆಹಲಿ ಸರ್ಕಾರ ಇಂದು ಸಭೆಯನ್ನು ಕರೆದಿದೆ. ಸಭೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರು ಮತ್ತು ಇತರ ಪಾಲುದಾರರು ಭಾಗವಹಿಸಲಿದ್ದಾರೆ.

ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಾದ ಮುಂಬೈ, ಪುಣೆ, ಥಾಣೆ ಮತ್ತು ಸಾಂಗ್ಲಿಯಲ್ಲೂ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಸರ್ಕಾರದ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅನೇಕ ಜನರು ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಇನ್ನೂ 1 ಕೋಟಿ ಜನರೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net