ಲಸಿಕೆಗೆ ಭಾರತ ಸನ್ನದ್ಧ; ಆದ್ಯತೆಗೆ ಸೇರದ ಜನಪ್ರತಿನಿಧಿಗಳು | ಮೊದಲ ಹಂತಕ್ಕೆ ಕೇಂದ್ರದ್ದೇ ವೆಚ್ಚ

Front
ಪ್ರಧಾನಿ ಮೋದಿ ಜತೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಿಎಂ ಯಡಿಯೂರಪ್ಪ ಮತ್ತು ಡಾ.ಸುಧಾಕರ್ ಇತರರು.
Published on

ನವದೆಹಲಿ: ಮಹಾಮಾರಿ ಕರೊನಾ ವಿರುದ್ಧದ ನಿರ್ಣಾಯಕ ಹಂತದ ಸಮರಕ್ಕೆ ಭಾರತ ಸನ್ನದ್ಧವಾಗಿದೆ. ಕಳೆದ ಕೆಲವು ತಿಂಗಳ ಪ್ರಯೋಗ, ಪ್ರಯತ್ನದ ಫಲವಾಗಿ ಕೋವಿಡ್ ಲಸಿಕೆ ಜನ ಬಳಕೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದು ಜ.16ಕ್ಕೆ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಮೊದಲ ಹಂತದಲ್ಲಿ 3 ಕೋಟಿ ಕೋವಿಡ್ ವಾರಿಯರ್ಸ್​ಗೆ ಲಸಿಕೆ ಉಚಿತವಾಗಿ ದೊರೆಯಲಿದ್ದು, ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳನ್ನು ಈ ಹಂತದಲ್ಲಿ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ. ಹಾಗೆಯೇ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಅತಿ ಕಡಿಮೆ ದರವನ್ನು ಲಸಿಕೆಗೆ ನಿಗದಿ ಪಡಿಸಿರುವುದು ಕ್ರಾಂತಿಕಾರಕ ಕ್ರಮ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಸೋಮವಾರ ಲಸಿಕೆ ವಿಚಾರವಾಗಿ ಸಿಎಂಗಳ ಜತೆ ಸಮಾಲೋಚನೆ ನಡೆಸಿದ ಪ್ರಧಾನಿ ಒಟ್ಟಾರೆ ಅಭಿಯಾನದ ಚಿತ್ರಣ ನೀಡಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಎಲ್ಲ ಸೂಕ್ಷ್ಮ ಪರಿಸ್ಥಿತಿ ಗಮನದಲ್ಲಿರಿಸಿಕೊಂಡು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಪ್ರತಿಯೊಂದು ಹಂತದಲ್ಲೂ ನಾವೆಲ್ಲರೂ ಸೇರಿ ಮಾಡಿದ ಕೆಲಸ ಸಂತೃಪ್ತಿ ತಂದಿದೆ. ನಮ್ಮ ಕೆಲಸ ಜನರಲ್ಲೂ ವಿಶ್ವಾಸ ತುಂಬಿದ್ದು, ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರಿವೆ. ಕರೊನಾ ವಿರುದ್ಧದ ಸಮರದಲ್ಲಿ ಕೇಂದ್ರ, ರಾಜ್ಯಗಳು ಒಟ್ಟಾಗಿ ಹೋರಾಟ ನಡೆಸಿವೆ. ಇದು ಫೆಡರಲಿಸಮ್ೆ ಅತ್ಯುತ್ತಮ ಉದಾಹರಣೆ ಎಂದರು.

ಮೋದಿ ಹೇಳಿದ್ದೇನು?
  • ಮೊದಲ ಹಂತದಲ್ಲಿ ಆರೋಗ್ಯ ಸೇವಾ ನೌಕರರು, ಪೌರಕಾರ್ವಿುಕರು ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಮೂರು ಕೋಟಿ ಕರೊನಾ ವಾರಿಯರ್ಸ್​ಗೆ ಲಸಿಕೆ
  • 2ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮತ್ತು 50 ವರ್ಷ ದೊಳಗಿನ ಕೋವಿಡ್ ಸೋಂಕಿತರು, ಇತರ ಅಸ್ವಸ್ಥತೆ ಹೊಂದಿರುವ ರೋಗಿಗಳಿಗೆ ಲಸಿಕೆ ನೀಡಲಾಗುತ್ತದೆ. ಇಂಥವರ ಸಂಖ್ಯೆ ದೇಶದಲ್ಲಿ 27 ಕೋಟಿ ಎಂದು ಅಂದಾಜಿಸಲಾಗಿದೆ
  • ಜಾಗತಿಕ ಮಟ್ಟದಲ್ಲಿ ಇದುವರೆಗೆ 50 ರಾಷ್ಟ್ರಗಳಲ್ಲಿ 2.5 ಕೋಟಿ ಜನರಿಗಷ್ಟೇ ಲಸಿಕೆ ನೀಡಲಾಗಿದೆ. ಆದರೆ, ನಮ್ಮಲ್ಲಿ ಕೆಲವೇ ತಿಂಗಳುಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಸಿಗಲಿದೆ
  • ಮೊದಲ ಹಂತದ 3 ಕೋಟಿ ಜನರಿಗೆ ಬಳಸುವ ಲಸಿಕೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ
  • ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಜ.16ಕ್ಕೆ ಶುರುವಾಗಲಿದ್ದು, ತುರ್ತಬಳಕೆಗೆ ಅನುಮತಿಸಲಾದ ಎರಡು ಸ್ವದೇಶಿ ನಿರ್ವಿುತ ಲಸಿಕೆಗಳು ಬಳಕೆಯಾಗಲಿವೆ. ಅಸ್ಟ್ರಾಝೆನಿಕಾ ಮತ್ತು ಆಕ್ಸ್​ಫರ್ಡ್ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್, ಸೇರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವ್ಯಾಕ್ಸಿನ್ ಈಗಾಗಲೇ ಅನುಮತಿಸಲಾದ ಲಸಿಕೆಗಳು
  • ಇದಕ್ಕೆ ಹೊರತಾಗಿ ನಾಲ್ಕು ಸ್ವದೇಶಿ ನಿರ್ವಿುತ ಲಸಿಕೆಗಳು ಅಭಿವೃದ್ಧಿಯ ಹಂತಗಳಲ್ಲಿವೆ

ಸಿಎಂಗಳಿಗೆ ಸಲಹೆ

  • ಜನಪ್ರತಿನಿಧಿಗಳು, ರಾಜಕಾರಣಿಗಳು ಮೊದಲ ಹಂತದ ಅಭಿಯಾನದ ವೇಳೆ ಲಸಿಕೆ ತೆಗೆದುಕೊಳ್ಳಲು ಅವಕಾಶ ನೀಡದಿರುವ ಬಗ್ಗೆ ಯಾರೂ ಅನ್ಯಥಾ ಭಾವಿಸಬಾರದು. ತುರ್ತು ಅಗತ್ಯ ಇರುವವರಿಗೆ ಮೊದಲು ಲಸಿಕೆ ಒದಗಿಸಬೇಕಾದ್ದು ಧರ್ಮ.
  • ಲಸಿಕೆಗಳ ಕುರಿತಾಗಿ ಯಾರೂ ವದಂತಿ ಹರಡದಂತೆ ರಾಜ್ಯ ಸರ್ಕಾರಗಳು ಖಾತರಿಪಡಿಸಿಕೊಳ್ಳಬೇಕು. ಸೋಷಿಯಲ್ ಮೀಡಿಯಾ ಮತ್ತು ಧಾರ್ವಿುಕ ಗ್ರೂಪ್​ಗಳಲ್ಲಿ ಈ ರೀತಿಯ ವದಂತಿ ಹರಡುವ ಸಾಧ್ಯತೆ ಇದ್ದು ಈ ಬಗ್ಗೆ ನಿಗಾ ವಹಿಸಬೇಕು.
  • ವಿದೇಶಿ ಲಸಿಕೆಗಳ ಮೇಲೆ ಅವಲಂಬಿತವಾಗಿರುವುದು ಎಷ್ಟು ಕಷ್ಟದ ಕೆಲಸ ಎಂಬುದು ಎಲ್ಲರೂ ಊಹಿಸಬಹುದಾದ ವಿಚಾರವಾಗಿದೆ. ಆದ್ದರಿಂದ ಮೇಡ್ ಇನ್ ಇಂಡಿಯಾ ಲಸಿಕೆಗಳು ಹೆಮ್ಮೆಯ ವಿಚಾರ.
  • ಇತರ ದೇಶಗಳಿಗೆ ಹೋಲಿಸಿದರೆ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ದೇಶವಾಸಿಗಳು ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಎಂಟು ತಿಂಗಳ ಹಿಂದಿನ ಪರಿಸ್ಥಿತಿ ಈಗಿಲ್ಲ.

ಕರೊನಾ ದೇಶದ ಚಿತ್ರಣ

ಸಕ್ರಿಯ ಪ್ರಕರಣ 2.25 ಲಕ್ಷಕ್ಕೆ ಕುಸಿತವಾಗಿದೆ. ಇದು ದೇಶದ ಒಟ್ಟು 1.04 ಕೋಟಿ ಪ್ರಕರಣದ ಶೇಕಡ 2.13 ಪಾಲಿನಷ್ಟಿದೆ. ಈವರೆಗೆ 1.5 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಡೇಟಾ ತೋರಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನಿತ್ಯ ಕೇಸ್​ಗಳ ಸಂಖ್ಯೆ 98,000 ತಲುಪಿತ್ತು. ಈಗ ಅದು ಅಂದಾಜು 16,000ಕ್ಕೆ ಇಳಿಕೆಯಾಗಿದೆ. ಆದಾಗ್ಯೂ, ಜಗತ್ತಿನ ಒಟ್ಟು ಕೇಸ್​ಗಳ ಸಂಖ್ಯೆ ತೆಗೆದುಕೊಂಡರೆ ಅಮೆರಿಕದ ನಂತರದ ಸ್ಥಾನದಲ್ಲಿ ಭಾರತವಿದೆ.

1.1 ಕೋಟಿ ಡೋಸ್ ಖರೀದಿಗೆ ಒಪ್ಪಂದ

ಕೋವಿಶೀಲ್ಡ್ ಲಸಿಕೆಯ 1.1 ಕೋಟಿ ಡೋಸ್ ಖರೀದಿಗೆ ಸೋಮವಾರ ಸೇರಂ ಸಂಸ್ಥೆಗೆ ಕೇಂದ್ರ ಸರ್ಕಾರ ಬೇಡಿಕೆ ಸಲ್ಲಿಸಿದೆ. ಪ್ರತೀ ಡೋಸ್ ಲಸಿಕೆಯ ಬೆಲೆ 200 ರೂಪಾಯಿ ಇದ್ದು, ಜಿಎಸ್​ಟಿ ಸೇರಿದಾಗ 210 ರೂಪಾಯಿ ಆಗುತ್ತಿದೆ. ಸೋಮವಾರ ಸಂಜೆಯೇ ಲಸಿಕೆಯನ್ನು ರವಾನಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಾರ್ವಜನಿಕ ಉದ್ಯಮವಾದ ಎಚ್​ಎಲ್​ಎಲ್ ಲೈಫ್​ಕೇರ್, ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸರಬರಾಜು ಆದೇಶವನ್ನು ಸಲ್ಲಿಸಿವೆ.

ರಾಜ್ಯದಲ್ಲಿ 16 ಲಕ್ಷ ಜನರಿಗೆ ಮದ್ದು

ಬೆಂಗಳೂರು: ಕರ್ನಾಟಕದಲ್ಲಿ ಆರೋಗ್ಯ ಕಾರ್ಯಕರ್ತರೂ ಸೇರಿ 16 ಲಕ್ಷ ಮುಂಚೂಣಿಯ ಕರೊನಾ ಯೋಧರಿಗೆ ಜ. 16ರಂದು ಮೊದಲ ಹಂತದಲ್ಲಿ ಕರೊನಾ ಲಸಿಕೆ ಹಾಕಲಾಗುವುದೆಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ಮೋದಿಯೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು. ರಾಜ್ಯದಲ್ಲಿ ಲಸಿಕೆ ವಿತರಣೆಗಾಗಿ 235 ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 16ರಂದು ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು. ಸದ್ಯದಲ್ಲೇ ಮೊದಲ ಕಂತಿನ ಲಸಿಕೆ ಡೋಸ್​ಗಳು ರಾಜ್ಯಕ್ಕೆ ತಲುಪಲಿದೆ ಎಂದು ಹೇಳಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎರಡು ಡೋಸ್ ಲಸಿಕೆ ಪಡೆದ 45 ದಿನಗಳ ಬಳಿಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದಿರಲು ಪ್ರಧಾನಿ ಸಲಹೆ ನೀಡಿದ್ದಾರೆಂದರು. ರಾಜ್ಯದ 16,44,747 ಕರೊನಾ ಯೋಧರಿಗೆ ಎರಡೂ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿಯಾಗಿ ಎರಡು ವಾಕ್-ಇನ್ ಫ್ರೀಜರ್​ಗಳನ್ನು ಕೇಂದ್ರ ರಾಜ್ಯಕ್ಕೆ ನೀಡಲಿದೆೆ ಎಂದು ತಿಳಿಸಿದರು.

ಮೊದಲ ಹಂತಕ್ಕೆ ಗುರುತಿಸಿದವರ ಪೈಕಿ 6.30 ಲಕ್ಷ ಜನರು ತಮ್ಮ ಹೆಸರು ನೋಂದಾಯಿಸಿದ್ದು, ಉಳಿದವರಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸಾಕಷ್ಟು ಕ್ಲಿನಿಕಲ್ ಟ್ರಯಲ್ ಆದ ಎರಡೂ ಲಸಿಕೆಗಳು ಸುರಕ್ಷಿತ, ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಜನ-ಸಾಮಾನ್ಯರ ಹಂತಕ್ಕೆ ಲಸಿಕೆ ವಿತರಣೆ ಯಾವಾಗ ಎಂದು ಈಗಲೇ ಹೇಳಲಾಗದು. ಸದ್ಯಕ್ಕಂತೂ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net