ಭಾರತದ ಅಕ್ಕಿ-ಗೋಧಿ ಮಾರುಕಟ್ಟೆಗಿಂತಲೂ ಹಾಲಿನ ಮಾರುಕಟ್ಟೆ ದೊಡ್ಡದು: ಪ್ರಧಾನಿ ಮೋದಿ

PM Modi
Published on

ಗುಜರಾತ್​: ಭಾರತದ ಅಕ್ಕಿ-ಗೋಧಿ ಮಾರುಕಟ್ಟೆಗಿಂತಲೂ ಹಾಲಿನ ಮಾರುಕಟ್ಟೆ ದೊಡ್ಡದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಗುಜರಾತ್​ನ ಕಲೋಲ್​ನಲ್ಲಿ ಇಫ್​ಕೊ ಸ್ಥಾಪಿಸಿರುವ ನ್ಯಾನೋ ಯೂರಿಯಾ (ಲಿಕ್ವಿಡ್​) ಪ್ಲಾಂಟ್​ ಉದ್ಘಾಟನೆ ಹಾಗೂ ಸಹಕಾರ್ ಸೆ ಸಮೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

2014ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ನಾವು ಯೂರಿಯಾಗೆ ಶೇ. 100 ನೀಮ್ ಕೋಟಿಂಗ್ ಮಾಡುವಲ್ಲಿ ಯಶಸ್ವಿ ಆಗಿದ್ದೇವೆ. ಆ ಮೂಲಕ ರೈತರು ಸಾಕಷ್ಟು ಯೂರಿಯಾ ಪಡೆಯುವಂತಾಗಿದೆ. ಅದಕ್ಕೆಂದೇ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ತೆಲಂಗಾಣಗಳಲ್ಲಿನ ಸ್ಥಗಿತಗೊಂಡಿದ್ದ ಐದು ರಸಗೊಬ್ಬರ ಕಾರ್ಖಾನೆಗಳನ್ನು ಮರು ಆರಂಭಿಸಿದ್ದೇವೆ ಎಂದರು.

ಭಾರತ ಆಮದು ಮಾಡಿಕೊಳ್ಳುವ ಯೂರಿಯಾದ 50 ಕೆ.ಜಿ. ಚೀಲಕ್ಕೆ 3,500 ಕೋಟಿ ರೂ. ತಗುಲುತ್ತದೆ. ಆದರೆ ದೇಶದಲ್ಲಿ ಅದೇ ಯೂರಿಯಾ ಚೀಲವನ್ನು 300 ರೂ.ಗೆ ನೀಡಲಾಗುತ್ತಿದೆ. ಪ್ರತಿ ಚೀಲಕ್ಕೆ 3,200 ರೂ. ಸರ್ಕಾರವೇ ಭರಿಸುತ್ತಿದೆ. ಆ ಮೂಲಕ ರೈತರ ಸಂಕಷ್ಟವನ್ನು ದೂರ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು.

ಇನ್ನು ಸಹಕಾರಿ ಕ್ಷೇತ್ರದ ಕುರಿತು ಮಾತನಾಡಿದ ಪ್ರಧಾನಿ, ದೇಶದಲ್ಲಿ ದಿನಕ್ಕೆ 8 ಲಕ್ಷ ಕೋಟಿ ರೂ. ಮೌಲ್ಯದ ಹಾಲು ಉತ್ಪಾದಿಸಲಾಗುತ್ತಿದೆ. ಅಕ್ಕಿ-ಗೋಧಿ ಎರಡನ್ನೂ ಸೇರಿಸಿ ಲೆಕ್ಕ ಹಾಕಿದರೂ ಆ ಮಾರುಕಟ್ಟೆಗಿಂತ ಹಾಲಿನ ಮಾರುಕಟ್ಟೆಯೇ ದೊಡ್ಡದು. ಗುಜರಾತ್​ನಲ್ಲಿನ ಬಹಳಷ್ಟು ಹಳ್ಳಿಗಳು ಪ್ರಗತಿ ಕಂಡಿದ್ದರೆ ಅದಕ್ಕೆ ಹೈನುಗಾರಿಕೆ ಸಂಬಂಧಿತ ಸಹಕಾರ ಕ್ಷೇತ್ರವೇ ಕಾರಣ ಎಂದು ಮೋದಿ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net