ಟಾಪ್​ 5 ತಲುಪಿದ ಭಾರತ: ಕೋವಿಡ್ 19 ಕೇಸ್​ಗಳ ಸಂಖ್ಯೆ ಸ್ಪೇನ್​ಗಿಂತಲೂ ಹೆಚ್ಚಾಯಿತು..

Corona
Published on

ನವದೆಹಲಿ: ಕರೊನಾ COVID19 ವೈರಸ್​ ಸೋಂಕಿತರ ಸಂಖ್ಯೆ ಶನಿವಾರ ಸಂಜೆ ಹೊತ್ತಿಗೆ ದೇಶದಲ್ಲಿ 2,45,670 ತಲುಪಿದೆ. ಇದರೊಂದಿಗೆ ಸ್ಪೇನ್​ಗಿಂತಲೂ ಹೆಚ್ಚಿನ ಕೇಸ್ ಭಾರತದಲ್ಲಿ ದಾಖಲಾದಂತೆ ಆಗಿದೆ. ಸ್ಪೇನ್​ನಲ್ಲಿ 2,41,310 ಕೇಸ್​ಗಳು ನಿನ್ನೆ ತನಕ ಪತ್ತೆಯಾಗಿತ್ತು ಎಂದು ಜಾನ್ ಹಾಪ್ಕಿನ್ಸ್​ ಯೂನಿವರ್ಸಿಟಿ ಡೇಟಾ ತಿಳಿಸಿದೆ.

ಈ ಬೆಳವಣಿಗೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಕೋವಿಡ್​ -19 ಕೇಸ್​ಗಳ ಸಂಖ್ಯೆಯಲ್ಲಿ ಟಾಪ್ 5 ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ. ಆದಾಗ್ಯೂ, ಭಾರತದಲ್ಲಿ ಈ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಕಡಿಮೆ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಡೇಟಾ ಪ್ರಕಾರ ಇಟಲಿಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 33,774 ಆದರೆ, ಸ್ಪೇನ್​​ನಲ್ಲಿ 27,134. ಇದುವೇ ಭಾರತದಲ್ಲಿ 6,642 ಆಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಭಾರತದಲ್ಲಿ ಕೋವಿಡ್ ಕೇಸ್​ಗಳ ಸಂಖ್ಯೆ ನಿತ್ಯವೂ 6,500ರ ಆಸುಪಾಸಿನಲ್ಲಿತ್ತು. ಈಗ ಇದು ನಿತ್ಯ 10,000ದ ಆಸುಪಾಸಿಗೆ ಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾ ಪ್ರಕಾರ, ಇದುವರೆಗಿನ ದಿನದ ಗರಿಷ್ಠ ಕೇಸ್​ಗಳ ಸಂಖ್ಯೆ 9,887 ಆಗಿದ್ದು, 294 ಮರಣ ಪ್ರಮಾಣ ಶನಿವಾರ ದಾಖಲಾಗಿದೆ. ಶನಿವಾರದ್ದೂ ಸೇರಿ ಸತತ ಮೂರು ದಿನ ಭಾರತದಲ್ಲಿ ಕೇಸ್​ಗಳ ಸಂಖ್ಯೆ 9,000ದ ಗಡಿ ದಾಟಿದೆ. ಶನಿವಾರ ರಾತ್ರಿ 8 ಗಂಟೆಯ ಡೇಟಾ ಪ್ರಕಾರ ಭಾರತದಲ್ಲಿ 2,36,657 ಕೇಸ್​ಗಳು ದಾಖಲಾಗಿವೆ.

ಈ ಪೈಕಿ ಕೋವಿಡ್ 19 ಸಕ್ರಿಯ ಕೇಸ್​ಗಳ ಸಂಖ್ಯೆ 1,15,942 ಇದ್ದರೆ, ಒಟ್ಟು 1,14,073 ಜನ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶನಿವಾರ ಸೋಂಕು ಮುಕ್ತರಾದವರ ಸಂಖ್ಯೆ 4,611. ಶನಿವಾರ ರಾತ್ರಿ 8 ಗಂಟೆ ವೆರೆಗಿನ 24 ಗಂಟೆ ಅವಧಿಯಲ್ಲಿ 1,37,938 ಮಾದರಿಗಳ ಕೋವಿಡ್ ಟೆಸ್ಟ್ ಮಾಡಿದ್ದು, ಇದುವರೆಗೆ ಒಟ್ಟಾರೆ 45,24,317 ಮಾದರಿಗಳ ಟೆಸ್ಟ್ ಸಂಪೂರ್ಣವಾಗಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net