

ನವದೆಹಲಿ: ಚೀನಾದಿಂದ ಅಂದಾಜು ಒಂದೂವರೆ ಕೋಟಿ ಕೋವಿಡ್-19 ಟೆಸ್ಟಿಂಗ್ ಕಿಟ್ಗಳಿಗಾಗಿ ಭಾರತ ಬೇಡಿಕೆ ಇಟ್ಟಿದೆ. ಈ ಪೈಕಿ 6.5 ಲಕ್ಷ ಟೆಸ್ಟಿಂಗ್ಕಿಟ್ಗಳನ್ನು ಚೀನಾ ಈಗಾಗಲೇ ಪೂರೈಸಿದೆ. ಆದರೆ, ಇವುಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳೆದ್ದಿವೆ. ಹೀಗಾಗಿ ದೇಶದಲ್ಲಿಯೇ ಇವುಗಳ ಉತ್ಪಾದನೆಯಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ.
ಇದೀಗ ದಕ್ಷಿಣ ಕೊರಿಯಾದ ಕಂಪನಿಗಳಿಂದ ಟೆಸ್ಟಿಂಗ್ ಕಿಟ್ಗಳನ್ನು ಖರೀದಿಸಲು ಭಾರತ ಮುಂದಾಗಿದೆ. ಹರಿಯಾಣದ ಮನೇಸರ್ನಲ್ಲಿರುವ ಘಟಕದಲ್ಲಿಯೇ ಇವುಗಳನ್ನು ಉತ್ಪಾದನೆ ಮಾಡಲಾಗುತ್ತಿರುವುದು ವಿಶೇಷವಾಗಿದೆ.
ದಕ್ಷಿಣ ಕೊರಿಯಾಕ್ಕೆ ಭಾರತದ ರಾಯಭಾರಿಯಾಗಿರುವ ಸುಪ್ರಿಯಾ ರಂಗನಾಥನ್ ಚಂಗ್ಚಿಯಾಂಗ್ನಲ್ಲಿರುವ ಎಸ್ಡಿ ಬಯೋಸೆನ್ಸರ್ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧದ ಮಾತುಕತೆಗಳನ್ನು ಮುಗಿಸಿದ್ದಾರೆ. ವಾರದೊಳಗೆ 5 ಲಕ್ಷ ಟೆಸ್ಟಿಂಗ್ ಕಿಟ್ಗಳನ್ನು ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಅಗತ್ಯ ಕಚ್ಚಾವಸ್ತುಗಳನ್ನು ಕ್ರೋಡೀಕರಿಸುತ್ತಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಾಜ್ಯಗಳಿಗೆ ಪೂರೈಸಲಾಗಿರುವ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಗಳನ್ನು ಇನ್ನೆರಡು ದಿನಗಳವರೆಗೆ ಬಳಸದಂತೆ ಮಂಗಳವಾರವಷ್ಟೇ ಹೇಳಿತ್ತು. ಸಂಸ್ಥೆಯ ಪರೀಕ್ಷಾ ತಂಡಗಳು ಕ್ಷೇತ್ರಕಾರ್ಯದ ವರದಿ ನೀಡಿದ ಬಳಿಕ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು.
ಇದಲ್ಲದೇ, ದಕ್ಷಿಣ ಕೊರಿಯಾದ ಹುಮಾಸಿಸ್ ಕಂಪನಿಯೊಂದಿಗೂ ಭಾರತ ಟೆಸ್ಟಿಂಗ್ ಕಿಟ್ ಹಾಗೂ ಇತರ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ದಕ್ಷಿಣ ಕೊರಿಯಾ ಕಂಪನಿಗಳು 4.5 ಲಕ್ಷ ಟೆಸ್ಟಿಂಗ್ ಕಿಟ್ಗಳನ್ನು ಭಾರತಕ್ಕೆ ಪೂರೈಸಿವೆ. ಈ ಮೂಲಕ ವೈದ್ಯಕೀಯ ಉತ್ಪನ್ನಗಳಿಗಾಗಿ ಚೀನಾ ಮೇಲಿನ ಅವಲಂಬನೆ ಕಡಿಮೆಯಾದಂತಾಗಲಿದೆ.