ಪಾಕ್ ಸುಪ್ರೀಂ ಆದೇಶಕ್ಕೆ ಭಾರತ ಆಕ್ರೋಶ!

POK
Published on

ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಪಾಕಿಸ್ತಾನ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಭಾರತ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಾಕ್​ಗೆ ತೀವ್ರ ಪ್ರತಿಭಟನೆ ದಾಖಲಿಸಿದೆ. ಅಕ್ರಮವಾಗಿ ವಶಪಡಿಸಿಕೊಂಡಿರುವ ಭಾರತದ ಪ್ರದೇಶವನ್ನು ತೆರವು ಮಾಡುವಂತೆಯೂ ಆಗ್ರಹಿಸಿದೆ.

ಚುನಾವಣೆಗೆ ಅವಕಾಶವಾಗುವಂತೆ ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರ ಮಾಡಿರುವ 2018ರ ತಿದ್ದುಪಡಿಗೆ ಪಾಕ್ ಸುಪ್ರೀಂಕೋರ್ಟ್ ಕೆಲ ದಿನಗಳ ಹಿಂದೆ ಒಪ್ಪಿಗೆ ನೀಡಿ ಚುನಾವಣೆಗೆ ಹಾದಿ ಸುಗಮಗೊಳಿಸಿತ್ತು. ಇದನ್ನು ತೀವ್ರವಾಗಿ ವಿರೋಧಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಪಾಕಿಸ್ತಾನ ಹೈಕಮಿಷನ್​ನ ರಾಜತಾಂತ್ರಿಕರೊಬ್ಬರನ್ನು ಕರೆಸಿಕೊಂಡ ಈ ಪ್ರತಿಭಟನೆ ದಾಖಲಿಸಿದೆ.

‘ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳ ಸಹಿತ ಇಡೀ ಜಮ್ಮು ಮತ್ತು ಕಾಶ್ಮಿರ ಮತ್ತು ಲಡಾಖ್, ಭಾರತದ ಅವಿಭಾಜ್ಯ ಅಂಗವಾಗಿವೆ. ಕಾನೂನುಬಾಹಿರ ಹಾಗೂ ಬಲವಂತವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ನ್ಯಾಯಾಂಗಕ್ಕೆ ಯಾವುದೇ ಅಧಿಕಾರವಿಲ್ಲ’ ಎಂದು ಸಚಿವಾಲಯ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ‘ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಯಾವುದೇ ಭೌತಿಕ ಬದಲಾವಣೆ ಮಾಡುವ ಪಾಕಿಸ್ತಾನದ ನಿರಂತರ ಪ್ರಯತ್ನಗಳನ್ನು ಭಾರತ ತಿರಸ್ಕರಿಸುತ್ತದೆ’ ಎಂದು ತಿಳಿಸಿದೆ.

ಪಾಕಿಸ್ತಾನದ ಕ್ರಮಗಳಿಂದ ಅಕ್ರಮ ಅತಿಕ್ರಮಣವನ್ನು ಮುಚ್ಚಿಡಲಾಗುವುದಿಲ್ಲ ಅಥವಾ ಕಳೆದ ಏಳು ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ‘ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ, ಶೋಷಣೆ ಮತ್ತು ಸ್ವಾತಂತ್ರ್ಯದ ನಿರಾಕರಣೆಯನ್ನುಮುಚ್ಚಿಡಲಾಗದು ಎಂದೂ ಸಚಿವಾಲಯ ಹೇಳಿದೆ.

ಪಾಕ್ ಕೋರ್ಟ್ ಆದೇಶವೇನು?

ಗಿಲ್ಗಿಟ್-ಬಾಲ್ಟಿಸ್ತಾನ್​ದಲ್ಲಿ ಸೆಪ್ಟೆಂಬರ್​ನಲ್ಲಿ ಚುನಾವಣೆ ನಡೆಸಲು ಪಾಕ್ ಸುಪ್ರೀಂಕೋರ್ಟ್ ಗುರುವಾರ ನೀಡಿದ್ದ ಆದೇಶದಲ್ಲಿ ಸೂಚಿಸಿದೆ. ಆವರೆಗಿನ ಮಧ್ಯಂತರ ಅವಧಿಯಲ್ಲಿ ಉಸ್ತುವಾರಿ ಸರ್ಕಾರ ರಚಿಸಲೂ ಅದು ಸೂಚಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ತನ್ನ ದೇಶದ ವ್ಯಾಪ್ತಿಗೆ ಬರುತ್ತದೆ ಎಂದೂ ಕೋರ್ಟ್ ಆದೇಶ ಹೇಳಿತ್ತು.

ಗಿಲ್ಗಿಟ್-ಬಾಲ್ಟಿಸ್ತಾನ್, ಏನು-ಎತ್ತ?

ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಉತ್ತರ ಹಾಗೂ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪೂರ್ವದಲ್ಲಿರುವ ಬೆಟ್ಟಗುಡ್ಡ ಪ್ರದೇಶ ಗಿಲ್ಗಿಟ್-ಬಾಲ್ಟಿಸ್ತಾನ್. 1846ರಲ್ಲಿ ಸಿಖ್ ಸೇನೆಯನ್ನು ಪರಾಭವಗೊಳಿಸಿದ ನಂತರ ಬ್ರಿಟಿಷರು ಇದನ್ನು ಜಮ್ಮು ಆಡಳಿತಗಾರ ಗುಲಾಬ್ ಸಿಂಗ್​ಗೆ ಮಾರಾಟ ಮಾಡಿದ್ದರು. ಆದರೆ, ಮಹಾರಾಜನಿಂದ ಗುತ್ತಿಗೆ (ಲೀಸ್) ಹಕ್ಕನ್ನು ಪಡೆದು ಅದರ ಮೇಲೆ ನಿಯಂತ್ರಣ ಉಳಿಸಿಕೊಂಡಿದ್ದರು. ಈ ಗುತ್ತಿಗೆ 1935ರಲ್ಲಿ ಕೊನೆ ಬಾರಿಗೆ ನವೀಕರಣಗೊಂಡಿತ್ತು. 1947ರಲ್ಲಿ ಈ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಲಾಗಿತ್ತು. ಬ್ರಿಟಿಷ್ ಸೇನಾಧಿಕಾರಿಯೊಬ್ಬರು ಮಹಾರಾಜ ಹರಿ ಸಿಂಗ್​ರ ರಾಜ್ಯಪಾಲರನ್ನು ಬಂಧಿಸಿ ಈ ಪ್ರದೇಶದಲ್ಲಿ ಇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net