ಭಾರತ ಸಿರಿಧಾನ್ಯಗಳ ತವರೂರು

klr siri nadige
ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಕರಪತ್ರ ಬಿಡುಗಡೆಗೊಳಿಸಿದರು. ಬಿ.ನಿಖಿಲ್​, ಶಿವಕುಮಾರ್​, ಎಂ.ಆರ್​.ಸುಮಾ, ಭವ್ಯರಾಣಿ ಇದ್ದರು.
Published on

ಕೋಲಾರ: ಜಿಲ್ಲಾಡಳಿತ, ಜಿ.ಪಂ ಹಾಗೂ ಕೃಷಿ ಇಲಾಖೆ ಸಹಾಯೋಗದಲ್ಲಿ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು "ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ' ಜಾಗೃತಿ ಜಾಥಾವನ್ನು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರದ ಜೂನಿಯರ್​ ಕಾಲೇಜು ಆವರಣದಿಂದ ಆರಂಭವಾದ ನಡಿಗೆ, ಬಂಗಾರಪೇಟೆ ವೃತ್ತ ಮಾರ್ಗವಾಗಿ ಸಾಗಿ ಪ್ರವಾಸಿ ಮಂದಿರ ಬಳಿ ಕೊನೆಗೊಂಡಿತು.

ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಮನುಷ್ಯನಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದರಿಂದ ಸಿರಿ ಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸಿರಿಧಾನ್ಯದ ಮಹತ್ವ, ಅರಿವು ಹೆಚ್ಚಾಗುತ್ತಿದೆ ಎಂದರು.

ಭಾರತ ಸಿರಿಧಾನ್ಯಗಳ ತವರೂರಾಗಿದೆ. ಜಗತ್ತಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಪೈಕಿ ಶೇ.42ರಷ್ಟು ಸಿರಿಧಾನ್ಯವನ್ನು ಭಾರತದಲ್ಲೇ ಬೆಳೆಯಲಾಗುತ್ತಿದ್ದು, ದೇಶದಲ್ಲಿ ರಾಜ್ಯ ಮುಂದಿದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಅತ್ಯುತ್ತಮ ಔಷಧ. ಬಹಳ ಕಡಿಮೆ ನೀರಿನಲ್ಲೂ ಸಿರಿಧಾನ್ಯ ಬೆಳೆಯಬಹುದಾಗಿದ್ದು, ರೋಗಮುಕ್ತ ಜೀವನಕ್ಕಾಗಿ ಎಲ್ಲರೂ ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು ಎಂದು ಡಿಸಿ ಕಿವಿಮಾತು ಹೇಳಿದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸತ್ವಗಳು, ಪ್ರೋಟಿನ್​, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಸಿರಿಧಾನ್ಯಗಳಲ್ಲಿ ಹೇರಳವಾಗಿದ್ದು, ಜೀವನಶೈಲಿ ಆಧಾರಿತ ಕೆಲ ರೋಗಗಳಿಗೂ ಸಿರಿಧಾನ್ಯಗಳು ಉತ್ತಮ ಮದ್ದಾಗಿವೆ. ಆಹಾರದಲ್ಲಿ ಸಿರಿಧಾನ್ಯ ಹೆಚ್ಚಾಗಿ ಬಳಸಬೇಕು. ಈ ಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಡಿಸಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್​ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಪಾಶ್ಚಾತ್ಯ ಆಹಾರ ಪದ್ಧತಿಗಳಿಗೆ ಮರುಳಾಗಿ ನಾಡಿನ ಆಹಾರ ಪದ್ಧತಿಯಿಂದ ದೂರ ಉಳಿಯುತ್ತಿದ್ದಾರೆ. ಸಾವಯವ ಕೃಷಿ ಮೂಲಕ ಬೆಳೆಯುವ ನವಣೆ, ಸಜ್ಜೆ, ರಾಗಿ ಹಾಗೂ ದ್ವಿದಳ ಧಾನ್ಯಗಳು ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠ್ಠಾಧಿಕಾರಿ ಬಿ.ನಿಖಿಲ್​, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಎಂ.ಆರ್​.ಸುಮಾ, ಕೃಷಿ ಉಪ ನಿರ್ದೇಶಕಿ ಭವ್ಯರಾಣಿ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಆನಂದ್​, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net