

ನವದೆಹಲಿ: ಜಗತ್ತಿನ ಪ್ರತಿಯೊಂದು ಉಪಕರಣದಲ್ಲೂ ಭಾರತ ನಿರ್ವಿುತ ಚಿಪ್ ಹೊಂದಿರಬೇಕು ಎನ್ನುವುದು ನಮ್ಮ ಕನಸಾಗಿದೆ. ಚಿಪ್ ಡಿಸೈನಿಂಗ್ನಲ್ಲಿ ಶೇಕಡ 20ರಷ್ಟು ಪ್ರತಿಭೆಗಳ ಕೊಡುಗೆ ಭಾರತದಿಂದ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಭಾರತವೇ ಚಾಲಕಶಕ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಗ್ರೇಟರ್ ನೋಯ್ಡಾದ ನಾಲೇಜ್ ಪಾರ್ಕ್ನಲ್ಲಿ ಬುಧವಾರ ‘ಸೆಮಿಕಾನ್ ಇಂಡಿಯಾ 2024 ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೆಮಿಕಂಡಕ್ಟರ್ ತಯಾರಿಕೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಸಮಗ್ರ, ಸ್ಥಿರ ನೀತಿ ಮತ್ತು ಸುಲಭವಾಗಿ ವ್ಯವಹರಿಸುವ ವ್ಯವಸ್ಥೆಯನ್ನು ಒದಗಿಸುತ್ತದೆ. ಭಾರತದಲ್ಲಿ ಹೂಡಿಕೆ ಮಾಡಲು ಇದುವೇ ಸರಿಯಾದ ಸಮಯ ಎಂದು ಕರೆ ನೀಡಿದರು.
ಜಾಗತಿಕ ಸೆಮಿಕಂಡಕ್ಟರ್ ಉದ್ಯಮಕ್ಕೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ಆಯೋಜಿಸುತ್ತಿರುವ ವಿಶ್ವದ 8ನೇ ದೇಶ ಭಾರತವಾಗಿದೆ. ಭಾರತದಲ್ಲಿ ಇರಲು ಇದುವೇ ಸರಿಯಾದ ಸಮಯವಾಗಿದೆ. ನೀವು ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿದ್ದೀರಿ. 21ನೇ ಶತಮಾನದಲ್ಲಿ ಭಾರತವು ಇಡೀ ವಿಶ್ವಕ್ಕೆ ಭರವಸೆಯಾಗಿದೆ. ತಂತ್ರಜ್ಞಾನ ಆಧಾರಿತ ಮಾರುಕಟ್ಟೆ ಹಾಗೂ ಬೆಳೆಯುತ್ತಿರುವ ಉತ್ಪಾದನಾ ನೆಲೆಯಾಗಿ ಭಾರತ ಸರ್ಕಾರವು ವಿಶಿಷ್ಟ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದು ಮೋದಿ ಹೇಳಿದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
‘ಸೆಮಿಕಾನ್ ಇಂಡಿಯಾ 2024 ಸಮಾವೇಶ’ ಸೆ.13ರವರೆಗೆ ನಡೆಯಲಿದ್ದು, ಜಗತ್ತಿನ ಮುಂಚೂಣಿಯ ಸೆಮಿಕಂಡಕ್ಟರ್ ಉತ್ಪಾದನಾ ಕಂಪನಿಗಳು ಸಮಾವೇಶದಲ್ಲಿ ಪಾಲ್ಗೊಂಡಿವೆ. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಪ್ರಸ್ತುತ ತೈವಾನ್ ಮೊದಲ ಸ್ಥಾನದಲ್ಲಿದ್ದು (ಶೇಕಡ 61), ಕ್ರಮವಾಗಿ ದಕ್ಷಿಣ ಕೊರಿಯಾ ಎರಡನೇ (ಶೇ.17) ಮತ್ತು ಚೀನಾ (ಶೇ.8) ಮೂರನೇ ಸ್ಥಾನದಲ್ಲಿವೆ. ಇತರ ದೇಶಗಳ ಪಾಲು ಶೇ.9ರಷ್ಟಿದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ಸಹಭಾಗಿತ್ವಕ್ಕೆ ಭಾರತ-ಅಮೆರಿಕ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಚೀನಾಕ್ಕೆ ಸ್ಪರ್ಧೆ ನೀಡಲು ಭಾರತ ಸಜ್ಜಾಗಿದೆ.
ಮೋದಿ ಭಾಷಣದ ಮುಖ್ಯಾಂಶಗಳು
* ಸೆಮಿಕಂಡಕ್ಟರ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಎಲ್ಲ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಮೂಲಸೌಕರ್ಯಗಳನ್ನು ಸೃಷ್ಟಿಸಲು ಮತ್ತು ವಿಸ್ತರಿಸಲು ಕೇಂದ್ರ ಸರ್ಕಾರ ಶೇಕಡ 50ರಷ್ಟು ನೆರವು ನೀಡುತ್ತಿದೆ.
* ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನೆಯ ಶಕ್ತಿಕೇಂದ್ರವಾಗಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ, ಅದನ್ನು ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಮಾಡುತ್ತಿದೆ.
* ಮೊದಲು ಭಾರತ ಜಗತ್ತಿನ ಅತಿ ದೊಡ್ಡ ಆಮದುದಾರ ರಾಷ್ಟ್ರಗಳ ಪೈಕಿ ಒಂದಾಗಿತ್ತು. ಆದರೆ, ಈಗ ಜಗತ್ತಿನ ಎರಡನೇ ಉತ್ಪಾದಕ ಹಾಗೂ ರಫ್ತುದಾರ ರಾಷ್ಟ್ರವಾಗಿದೆ. ಭಾರತವು 5ಜಿ ಮೊಬೈಲ್ ಜಗತ್ತಿನ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮ ಪ್ರಸ್ತುತ 150 ಬಿಲಿಯನ್ ಡಾಲರ್ನದ್ದಾಗಿದ್ದು, ಇದರಿಂದ ದೇಶದ ಯುವಕರಿಗೆ 60 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಇದರ ಲಾಭ ಭಾರತದ ಸೆಮಿಕಂಡಕ್ಟರ್ ಕ್ಷೇತ್ರಕ್ಕೂ ಆಗಲಿದೆ.
* ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ನ ಶೇಕಡ 100ರಷ್ಟು ಕೆಲಸ ಭಾರತದಲ್ಲೇ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ.
ಬೆಳವಣಿಗೆಯ ಹೆಜ್ಜೆ: ಅಸ್ಸಾಂ ಮತ್ತು ಗುಜರಾತ್ನಲ್ಲಿ ಒಟ್ಟು 1.25 ಲಕ್ಷ ಕೋಟಿ ರೂಪಾಯಿ ಮೊತ್ತದ 3 ಸೆಮಿಕಂಡಕ್ಟರ್ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಮಾರ್ಚ್ ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಗುಜ ರಾತ್ನ ಧೊಲೇರಾದಲ್ಲಿ ಟಾಟಾ ಸಮೂಹ ನಿರ್ವಿುಸುತ್ತಿರುವ ಭಾರತದ ಮೊಟ್ಟಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕವು 2026ರ ವರ್ಷಾಂತ್ಯದಲ್ಲಿ ಭಾರತದಲ್ಲೇ ವಿನ್ಯಾಸಗೊಳಿಸಿರುವ ಮೊದಲ ಚಿಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಧೊಲೆರಾದಲ್ಲಿ 28 ನ್ಯಾನೋಮೀಟರ್ಸ್ ವ್ಯಾಪ್ತಿಯ ಚಿಪ್ಗಳನ್ನು ವಿನ್ಯಾಸಗೊಳಿಸಲು ಉದ್ದೇಶಿಸಲಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿ, ಕೇಂದ್ರ ಸರ್ಕಾರ 2021ರ ಡಿಸೆಂಬರ್ನಲ್ಲಿ 76 ಸಾವಿರ ಕೋಟಿ ರೂ. ಮೌಲ್ಯದ ಉತ್ತೇಜನ ಯೋಜನೆಯನ್ನು ಪ್ರಕಟಿಸಿತ್ತು.