

ಶಿವಮೊಗ್ಗ: ಸನಾತನ ಪರಂಪರೆ, ಸಂಸ್ಕೃತಿಯಿಂದ ಭಾರತ ಇಂದು ವಿಶ್ವಕ್ಕೆ ಗುರುವಾಗಿದೆ. ಆದರೆ ಕೆಲವರು ಸನಾತನ ಪರಂಪರೆ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಆ ಕೆಲಸ ಆಗದಂತೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಜಗಳೂರು ಕಣ್ವಕುಪ್ಪೆಯ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ವೀರಭದ್ರೇಶ್ವರ ಜಯಂತಿಯ ಧರ್ಮಸಭೆಯಲ್ಲಿ ಆಶೀವರ್ಚನ ನೀಡಿದ ಅವರು, ಧರ್ಮ ಮತ್ತು ಸನಾತನ ಪರಂಪರೆ ಧಕ್ಕೆ ಉಂಟಾದಾಗ ಕೇದಾರನಾಥ ಶ್ರೀಗಳು ಉಗ್ರ ಸ್ವರೂಪ ತಾಳುತ್ತಾರೆ ಎಂದರು.
ವೀರಭದ್ರ ಸ್ವಾಮಿಗೂ ಹಿಮಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಹಿಮಾಲಯ ದೈವ ಭೂಮಿಯೂ ಹೌದು. ಶ್ರದ್ಧಾ, ಭಕ್ತಿಯಿಂದ ಕೂಡಿದ ಧಾರ್ಮಿಕ ಕೇಂದ್ರವೂ ಆಗಿದೆ ಎಂದು ಹೇಳಿದರು.
ಸಮಾಜದ ಮುಖಂಡ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಚನ್ನಗಿರಿ ಹಿರೇಮಠದ ಶ್ರೀ ಕೇದಾರ ಲಿಂಗ ಶಿವಶಾಂತ ವೀರ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ವೇದಿಕೆ ವೈದ್ಯಕೀಯ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಶಿವರಾಜ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಧನರಾಜ್, ವೀರಶೈವ ಕಲ್ಯಾಣ ಮಂದಿರದ ಗೌರವ ಕಾರ್ಯದರ್ಶಿ ಎನ್.ಜೆ.ರಾಜಶೇಖರ್ ಉಪಸ್ಥಿತರಿದ್ದರು.