

ನವದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುದ್ಧ ಪೂರ್ಣಿಮಾ ನಿಮಿತ್ತ ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶದ ಜನರಿಗೆ ಬುದ್ಧ ಪೂರ್ಣಿಮಾದ ಶುಭಾಶಯಗಳನ್ನು ಕೋರಿದರು.
ಈಗ ಎಲ್ಲೆಡೆ ಕರೊನಾ ಪರಿಸ್ಥಿತಿ ಇದೆ. ಹಾಗಾಗಿ ನಾನು ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ನಿಮ್ಮೆಲ್ಲರೊಂದಿಗೆ ಸೇರಿ ಇದನ್ನು ಆಚರಿಸಬೇಕು ಎಂಬ ಆಸೆಯಿತ್ತು. ಆದರೆ ಈ ಸಂದರ್ಭದಲ್ಲಿ ಆಗುವುದಿಲ್ಲ ಎಂದು ಹೇಳಿದರು.
ಪ್ರತಿಯೊಬ್ಬರ ಜೀವನದ ಕಷ್ಟಗಳನ್ನು ಕಡಿಮೆ ಮಾಡುವುದು ಭಾರತದ ಸಂಸ್ಕೃತಿ. ಬುದ್ಧ ಈ ದೇಶದ ಸಂಸ್ಕೃತಿ ಮತ್ತು ನಾಗರಿಕತೆಯ ಪುಷ್ಟೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭಗವಾನ್ ಬುದ್ಧ ಒಂದು ಬೆಳಕಾಗಿ ಮಾರ್ಪಟ್ಟರು. ಹಾಗೇ ತಮ್ಮ ಬದುಕಿನ ಪ್ರಯಾಣದುದ್ದಕ್ಕೂ ಇನ್ನೊಬ್ಬರ ಜೀವನವನ್ನೂ ಬೆಳಗಿದರು ಎಂದರು.
ಬುದ್ಧ ಎಂದರೆ ಬರೀ ಹೆಸರಲ್ಲ. ಪಾವಿತ್ರ್ಯ. ಸಾಕ್ಷಾತ್ಕಾರ ಮತ್ತು ಸ್ವಯಂ ಸಾಕ್ಷಾತ್ಕಾರಗಳ ಸಂಕೇತ. ಭಾರತ ಸ್ವಯಂ ಸಾಕ್ಷಾತ್ಕಾರಗೊಂಡಿದೆ. ಬುದ್ಧನ ಸಂದೇಶದಂತೆ, ಈ ಸಂಕಷ್ಟ ಕಾಲದಲ್ಲಿ, ಮಾನವೀಯತೆಯ ಆಧಾರದಲ್ಲಿ, ಎಲ್ಲ ಜನರ ಹಿತದೃಷ್ಟಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಜಗತ್ತಿಗೂ ಸಹಕಾರ ನೀಡಿದೆ ಎಂದು ಹೇಳಿದರು.
ದೇಶದಲ್ಲಿ ಸದ್ಯ ಕರೊನಾ, ಲಾಕ್ಡೌನ್ನಂತಹ ಸಂಕಷ್ಟದ ಕಾಲದಲ್ಲಿ ಇದ್ದೇವೆ. ಈ ಮಧ್ಯೆ ಅದೆಷ್ಟೋ ಜನ 24 ಗಂಟೆಯೂ ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುವವರು, ಕಾನೂನು ಸುವ್ಯವಸ್ಥೆ ಕಾಪಾಡುವರು, ಸ್ವಚ್ಛತಾ ಕಾರ್ಯ ಮಾಡುವವರು ತಮ್ಮ ಸ್ವಂತ ಸುಖ, ಕೆಲಸಗಳನ್ನೆಲ್ಲ ಬದಿಗೊತ್ತಿ ದೇಶದ ಜನರಿಗಾಗಿ ದುಡಿಯುತ್ತಿದ್ದಾರೆ. ಇಂದು ಬುದ್ಧ ಪೂರ್ಣಿಮಾ ಸಂದರ್ಭದಲ್ಲಿ ಅವರಿಗೆಲ್ಲ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಂಥವರೆಲ್ಲರೂ ಹೊಗಳಿಕೆ ಮತ್ತು ಗೌರವಕ್ಕೆ ಅರ್ಹರು ಎಂದು ಹೇಳಿದರು.
ಪ್ರತಿಯೊಬ್ಬನ ಸಹಾಯಕ್ಕೆ ದೇಶ ಸಿದ್ಧವಾಗಿದೆ. ಯಾರಲ್ಲೂ ತಾರತಮ್ಯ ಮಾಡುವುದಿಲ್ಲ. ಯಾರಿಗೇ ಯಾವುದೇ ಕಷ್ಟ ಇರಲಿ ದೇಶ ನಿಮ್ಮೊಂದಿಗೆ ಇದೆ. ಅಷ್ಟೇ ಅಲ್ಲ, ಜಗತ್ತಿನ ಬೇರೆ ದೇಶಗಳು, ಬೇರೆ ದೇಶಗಳಲ್ಲಿರುವ ಭಾರತೀಯರಿಗೂ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ನಾವೆಲ್ಲರೂ ಕೊವಿಡ್-19 ಪರಿಸ್ಥಿತಿಯನ್ನು ಒಗ್ಗಟ್ಟಾಗಿ ಎದುರಿಸೋಣ ಎಂದರು.
ಇದನ್ನೂ ಓದಿ: ಕರೊನಾ ವಿರುದ್ಧ ಪ್ರಧಾನಿ ಮೋದಿಯ ದಿಟ್ಟ ಹೋರಾಟ