ಭಾರತ ವಿಭಿನ್ನ ಕಲೆ, ಸಂಸ್ಕೃತಿಗಳ ಬೀಡು

sangeeta sabha
ಸಾಗರದಲ್ಲಿ ಶ್ರೀ ಗಾಂಧಾರ ಸಂಗೀತ ಸಭಾ ಆಯೋಜಿಸಿದ್ದ ಪುರಂದರದಾಸರು, ತ್ಯಾಗರಾಜರ ಆರಾಧನೋತ್ಸವವನ್ನು ಮಹಾಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಉದ್ಘಾಟಿಸಿದರು. ಅನಿತಾ ವೆಂಕಟೇಶ್, ಡಾ. ವಿಜಯಲಕ್ಷ್ಮೀ, ಜಿ.ಅನಂತ ಅವಧಾನಿ ಇದ್ದರು.
Published on

ಸಾಗರ: ಪ್ರತಿ ಕಲೆಯೂ ಒಂದು ಸಂಸ್ಕೃತಿಯ ಮೂಲವಾಗಿರುತ್ತದೆ. ಇದು ಭಾರತದ ಹಿರಿಮೆಗೆ ಸಾಕ್ಷಿ ಎಂದು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಹೇಳಿದರು.

ನಗರದ ಶ್ರೀ ಗಾಂಧಾರ ಸಂಗೀತ ಸಭಾ ಏರ್ಪಡಿಸಿದ್ದ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು, ನಾದಬ್ರಹ್ಮ ತ್ಯಾಗರಾಜರ ಆರಾಧನಾ ಮಹೋತ್ಸವ ಮತ್ತು ಸಂಸ್ಥೆಯ 15ನೇ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಭವ್ಯ ಕಲಾ ಪರಂಪರೆಯ ನಾಡು. ಮನಸ್ಸು ನೆಮ್ಮದಿಯಿಂದ ಇರುವುದಕ್ಕೆ ಪೂರಕವಾಗಿರುವ ಸಾಹಿತ್ಯ ಮತ್ತು ಕಲಾ ಪ್ರಕಾರಗಳು ಜಗತ್ತಿನಲ್ಲಿಯೇ ಶ್ರೇಷ್ಠತೆ ಹೊಂದಿದೆ. ಹಣದ ಹಿಂದೆ ಬೀಳದೆ, ಕಲೆಯ ಸೊಗಡನ್ನು ಬೀರುವ ಕಲಾವಿದರು ನಮ್ಮ ಸಂಪತ್ತು ಎಂದರು.

ಸಂಸ್ಥೆಯ ಮುಖ್ಯಸ್ಥೆ ವಿದುಷಿ ಅನಿತಾ ವೆಂಕಟೇಶ್ ಮಾತನಾಡಿ, ಕಲಿಕೆಗೆ ಮತ್ತು ಗ್ರಹಿಕೆಗೆ ನಿರಂತರತೆ ಇರಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ವೇದಿಕೆಗಳಲ್ಲಿ ಕಾರ್ಯಕ್ರಮಗಳ ಮೂಲಕ ವಿಜೃಂಭಿಸುವುದು ಮಾತ್ರ ಕಲಾವಿದನ ಕೆಲಸವಲ್ಲ. ಪಾಂಡಿತ್ಯವನ್ನು ಪಡೆದು ಅದರಲ್ಲಿ ಯಶಸ್ವಿ ಆಗಬೇಕು. ಅದರಲ್ಲಿಯೂ ಸಂಗೀತ ಕಲೆ ಒಲಿಯಬೇಕಾದರೆ ಅದು ಗುರು ಮುಖೇನವಾದರೆ ಮಾತ್ರ ಸಾಧ್ಯ ಎಂದು ತಿಳಿಸಿದರು.

ಸಂಗೀತ ಲೋಕಕ್ಕೆ ಪುರಂದರದಾಸರು, ಕನಕದಾಸರು, ತ್ಯಾಗರಾಜರು ಮುಂತಾದ ಮಹನೀಯರು ನೀಡಿದ ಕೊಡುಗೆ ದೊಡ್ಡದು. ಅದನ್ನು ಯುವ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಸಂಗೀತ ಶಿಕ್ಷಕರಾದ ನಮ್ಮ ಹೆಗಲ ಮೇಲಿದೆ ಎಂದರು.

ವಿದುಷಿ ಡಾ. ವಿಜಯಲಕ್ಷ್ಮೀ ಕಂಪ್ಲಿ, ವಿದ್ವಾನ್ ಜಿ.ಅನಂತ ಅವಧಾನಿ, ಖ್ಯಾತ ವಯೋಲಿನ್ ವಾದಕ ವೆಂಕಟರಾಮ್, ವೆಂಕಟೇಶ್ ನಂದೀತಳೆ, ಅಂಜನ್ ಶ್ಯಾನಭೋಗ್, ಭಾಗ್ಯಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net