ಚೀನಾದಿಂದ ಭಾರತೀಯರನ್ನು ಕರೆತರಲು ತೆರಳಲಿದೆ ಮತ್ತೊಂದು ವಿಶೇಷ ವಿಮಾನ: ಕೂಡಲೇ ಸಂಪರ್ಕಿಸಿ ಎಂದ ರಾಯಭಾರಿ ಕಚೇರಿ

corona
Published on

ನವದೆಹಲಿ: ಕೊರೊನಾ ಭೀತಿಯಲ್ಲಿ ನಡುಗುತ್ತಿರುವ ಚೀನಾ ದೇಶದಲ್ಲಿರುವ ಭಾರತೀಯರನ್ನು ಈಗಾಗಲೇ ಎರಡು ವಿಶೇಷ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತರಲಾಗಿದೆ. ಮುಂದಿನ ವಾರದಲ್ಲಿ ವಿಶೇಷ ವಿಮಾನವೊಂದು ಚೀನೀಯರ ನೆರವಿಗೆಂದು ಭಾರತದಿಂದ ವೈದ್ಯಕೀಯ ಸಾಮಾಗ್ರಿಗಳು ಹೊತ್ತೊಯ್ಯಲಿದ್ದು ಭಾರತಕ್ಕೆ ಬರಲಿಚ್ಛಿಸುವ ಭಾರತೀಯರನ್ನು ಆ ವಿಮಾನದಲ್ಲಿ ವಾಪಸು ಕರೆತರಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಮುಂದಿನ ವಾರದಲ್ಲಿ ಒಂದು ವಿಶೇಷ ವಿಮಾನದಲ್ಲಿ ಭಾರತವು ಅನೇಕ ವೈದ್ಯಕೀಯ ಸಾಮಗ್ರಿಗಳನ್ನು ಚೀನಾದ ವುಹಾನ್​ಗೆ ಕಳುಹಿಸಲಿದೆ. ಈಗಾಗಲೇ ಎರಡು ವಿಶೇಷ ವಿಮಾನಗಳಲ್ಲಿ 647 ಭಾರತೀಯರು ವುಹಾನ್​ನಿಂದ ಸ್ವದೇಶಕ್ಕೆ ಬಂದಿಳಿದಿದ್ದು ಇನ್ನೂ ಅನೇಕರು ಬರಲಿಚ್ಛಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಅದೇ ಕಾರಣದಿಂದಾಗಿ ಇದೀಗ ಭಾರತಕ್ಕೆ ಬರಲಿಚ್ಛಿಸುವ ದೇಶಿಯರಿಗೆ ಈ ಕೂಡಲೇ ಅಲ್ಲಿರುವ ರಾಯಭಾರಿ ಕಚೇರಿಯನ್ನು ಭೇಟಿ ಮಾಡುವಂತೆ ತಿಳಿಸಲಾಗಿದೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಚೀನಾದ ಭಾರತೀಯ ರಾಯಭಾರಿ ಕಚೇರಿಯು, ಭಾರತಕ್ಕೆ ತೆರಳಿಚ್ಛಿಸುವವರು ಕೂಡಲೇ ನಮ್ಮ ನಂಬರ್​ಗೆ ಕರೆ ಮಾಡಿ ಅಥವಾ ಮೇಲ್​ ಮಾಡಿ ಎಂದು ಫೋನ್​ ನಂಬರ್​ ಮತ್ತು ಮೇಲ್​ ಐಡಿಯನ್ನು ನೀಡಿದೆ. ಈ ದಿನ ಸಂಜೆ 7 ಗಂಟೆಯೊಳಗಾಗಿ ಸಂಪರ್ಕಿಸಿ ಎಂದು ಕೇಳಲಾಗಿದೆ.

ಚೀನಾದಲ್ಲಿ ಕೊರೊನಾ ವೈರಸ್​ನ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಸಾವಿನ ಸಂಖ್ಯೆ 1665ಕ್ಕೂ ಹೆಚ್ಚಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net