

ವಾಷಿಂಗ್ಟನ್: ಪೂರ್ವ ಲಡಾಖ್ನಲ್ಲಿ ಚೀನಾ ಸೇನೆ ಇತ್ತೀಚೆಗೆ ಮಾಡಿದ ಆಕ್ರಮಣದ ವಿಚಾರವಾಗಿ ಅಮೆರಿಕದಲ್ಲಿ ಭಾರತಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಂಸತ್ತಿನ ಉಭಯ ಸದನಗಳಾದ ಜನಪ್ರತಿನಿಧಿ ಸಭೆ (ಹೌಸ್ ಆಫ್ ರೆಪ್ರಸಂಟೇಟಿವ್ಸ್) ಹಾಗೂ ಸೆನೆಟ್ ಸದಸ್ಯರು ಭಾರತದ ಪರವಾಗಿ ದನಿಯೆತ್ತಿದ್ದಾರೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದವರು ಪಕ್ಷಭೇದ ಮರೆತು ಭಾರತದ ಬೆಂಬಲಕ್ಕೆ ನಿಂತಿದ್ದಾರೆ. ಇದು ಭಾರತ-ಅಮೆರಿಕ ಬಾಂಧವ್ಯ ಗಟ್ಟಿಗೊಳ್ಳಲು ಇನ್ನಷ್ಟು ಸಹಕಾರಿಯಾಗಿದೆ. ಮಿಲಿಟರಿ ಆಕ್ರಮಣ ನಿಲ್ಲಿಸುವಂತೆ ಕರೆ ನೀಡಿರುವ ಕಾಂಗ್ರೆಸ್ ಸದಸ್ಯ ಫ್ರಾಂಕ್ ಪಲ್ಲೋನ್, ಸಮಸ್ಯೆಯನ್ನು ಶಾಂತಿಯುತ ಮಾರ್ಗಗಳಿಂದ ಇತ್ಯರ್ಥಪಡಿಸಬೇಕು ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ: ಟ್ವೀಟ್, ಭಾಷಣಗಳು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ತರಣ್ಜಿತ್ ಸಂಧುರಿಗೆ ಪತ್ರದ ಮೂಲಕವೂ ಭಾರತಕ್ಕೆ ಬೆಂಬಲ ವ್ಯಕ್ತವಾಗಿದೆ. ಸಂಸತ್ತಿನಲ್ಲಿ ಹಲವು ಠರಾವುಗಳನ್ನೂ ಅಂಗೀಕರಿಸಲಾಗಿದೆ. ಪತ್ರ ಬರೆದವರಲ್ಲಿ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸಂಸದೆಯಾಗಿರುವ ಪ್ರಮೀಳಾ ಜಯಪಾಲ್ ಕೂಡ ಇದ್ದಾರೆ.
ಚೀನಿ ಭಾಷೆಗೆ ಕೊಕ್: ಕೇಂದ್ರ ಸರ್ಕಾರ ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಮಾಧ್ಯಮಿಕ ವಿದ್ಯಾರ್ಥಿಗಳು ಕಲಿಯಬಹುದಾದ ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಚೀನಿ ಭಾಷೆ ಇಲ್ಲ. ಜಗತ್ತಿನ ಸಂಸ್ಕೃತಿಗಳನ್ನು ಅರಿತು ಜಾಗತಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ವಿದ್ಯಾರ್ಥಿಗಳು ಆಯ್ದ ವಿದೇಶಿ ಭಾಷೆಗಳನ್ನು ಕಲಿಯಬಹುದು ಎಂದು ನೀತಿ ಹೇಳಿದೆ. ಆದರೆ ಅದು ಸೂಚಿಸಿರುವ ಪಟ್ಟಿಯಲ್ಲಿ ಚೀನಿ ಭಾಷೆಗೆ ಸ್ಥಾನ ಸಿಕ್ಕಿಲ್ಲ.
ಕಳೆದ ವರ್ಷ ಇಂಗ್ಲಿಷ್ನಲ್ಲಿ ಬಿಡುಗಡೆಯಾಗಿರುವ ಕರಡಿನಲ್ಲಿ ಫ್ರೆಂಚ್, ಜರ್ಮನಿ, ಸ್ಪ್ಯಾನಿಶ್ ಮತ್ತು ಜಪಾನಿ ಭಾಷೆಗಳು ಸ್ಥಾನ ಪಡೆದಿವೆ. ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ರಮೇಶ್ ಪೋಖ್ರಿಯಾಲ್ ಈ ವಾರ ಬಿಡುಗಡೆ ಮಾಡಿದ ಅಂತಿಮ ನೀತಿಯಲ್ಲಿ ಕೊರಿಯಾ, ರಷ್ಯಾ, ಪೋರ್ಚುಗೀಸ್ ಮತ್ತು ಥಾಯ್ ಭಾಷೆಗಳನ್ನು ಸೇರಿಸಲಾಗಿದೆ. ಇಲ್ಲಿಯೂ ಚೀನಿ ಭಾಷೆಯನ್ನು ಕೈಬಿಡಲಾಗಿದೆ.