

ನವದೆಹಲಿ: ಜಗತ್ತಿನಾದ್ಯಂತ ಕಚ್ಚಾತೈಲ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಅದರ ಉತ್ಪಾದನೆ ಮೇಲೆ ಹೇರಿದ್ದ ಮಿತಿಯನ್ನು ಸಡಿಲಿಸಬೇಕಾದ ತುರ್ತು ಅಗತ್ಯವಿದೆ ಎಂದು ಭಾರತ ಸರ್ಕಾರ ಮತ್ತೊಮ್ಮೆ ಪ್ರಬಲವಾಗಿ ಪ್ರತಿಪಾದಿಸಿದೆ.
ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ತೈಲ ಬಳಕೆ ಹೆಚ್ಚಾಗಿದೆ. ಹೀಗಾಗಿ ಬೇಡಿಕೆಯೂ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಪೂರೈಕೆಯೂ ಹೆಚ್ಚಾಗಬೇಕು. ತೈಲ ಉತ್ಪಾದನೆ ಮಾರುಕಟ್ಟೆ ಆಧಾರಿತವಾಗಿ ನಡೆಯಬೇಕು. ಕೃತಕವಾಗಿ ನಿರ್ವಹಿಸಲ್ಪಡಬೇಕಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಶುಕ್ರವಾರ ಹೇಳಿದ್ದಾರೆ.
ಆರ್ಗನೈಸೇಷನ್ಆಫ್ ಪೆಟ್ರೋಲಿಯಂ ಎಕ್ಸ್ ಪೋರ್ಟಿಂಗ್ ಕಂಟ್ರೀಸ್ (ಒಪೆಕ್) ಮತ್ತು ಒಪೆಕ್ ಪ್ಲಸ್ ರಾಷ್ಟ್ರಗಳಲ್ಲಿ ಭಾರತ ಈ ಕುರಿತು ಈ ವರ್ಷ ಆರಂಭದಿಂದಲೇ ಮನವಿ ಮಾಡುತ್ತಲೇ ಬಂದಿದೆ. ಈ ರಾಷ್ಟ್ರಗಳು ಕಚ್ಚಾತೈಲ ಉತ್ಪಾದನೆ ಮೇಲೆ ಮಿತಿಯನ್ನು ಅಲ್ಪ ಪ್ರಮಾಣದಲ್ಲಿ ಸಡಿಲಿಸುವ ಕ್ರಮವನ್ನು ಕಳೆದ ವಾರ ಘೋಷಿಸಿದ್ದವು. ಇದನ್ನು ಭಾರತ ಗಮನಿಸಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂದು ಬಗ್ಚಿ ಹೇಳಿದ್ದಾರೆ.
ಮನವಿ ತಿರಸ್ಕರಿಸಿದ್ದ ಸೌದಿ: ಕಳೆದ ತಿಂಗಳ ಆರಂಭದಲ್ಲಿ, ಜಾಗತಿಕ ಮಟ್ಟದಲ್ಲಿ ಹೆಚ್ಚಳವಾಗುತ್ತಿರುವ ತೈಲ ಬೇಡಿಕೆ ಮತ್ತು ದರ ಏರಿಕೆ ಕಾರಣ ತೈಲ ಉತ್ಪಾದನೆ ಹೆಚ್ಚಿಸಬೇಕೆಂಬ ಗ್ರಾಹಕ ರಾಷ್ಟ್ರಗಳ ಬೇಡಿಕೆಗೆ ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್+ ಸೊಪ್ಪು ಹಾಕಿರಲಿಲ್ಲ. ತೈಲೋತ್ಪಾದನೆ ಹೆಚ್ಚಿಸಬೇಕೆಂದು ಮುಂಚೂಣಿ ತೈಲೋತ್ಪಾದಕ ರಾಷ್ಟ್ರ ಸೌದಿ ಅರೇಬಿಯಾ ಬಳಿ ಭಾರತ ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೌದಿ, ಕಳೆದ ವರ್ಷ ಕಡಿಮೆ ಬೆಲೆ ಖರೀದಿಸಿಟ್ಟುಕೊಂಡಿದ್ದ ತೈಲ ದಾಸ್ತಾನನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿತ್ತು.
ತೈಲೋತ್ಪಾದನೆ ಹೀಗಿದೆ
ಒಪೆಕ್ + ರಾಷ್ಟ್ರಗಳು ಸದ್ಯದ ಪರಿಸ್ಥಿತಿಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ನಿತ್ಯ 70 ಲಕ್ಷ ಬ್ಯಾರೆಲ್ಗೆ ನಿಯಂತ್ರಿಸುತ್ತಿವೆ. ಇದು ಕರೊನಾ ಸಂಕಷ್ಟ ಶುರುವಾಗುವುದಕ್ಕಿಂತ ಮೊದಲಿನ ಪೂರೈಕೆಗೆ ಹೋಲಿಸಿದರೆ ಶೇಕಡ 7ರಷ್ಟು ಪೂರೈಕೆ ಹೆಚ್ಚಳವಾಗಿದೆ. ಸೌದಿ ಅರೇಬಿಯಾ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹೆಚ್ಚುವರಿ 10 ಲಕ್ಷ ಬ್ಯಾರೆಲ್ ಉತ್ಪಾದನೆಯನ್ನು ಕಡಿತಗೊಳಿಸುವ ಸ್ವಯಂ ತೀರ್ಮಾನ ವನ್ನು ಮಾಡಿಕೊಂಡಿದ್ದವು.