

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 4, 421ಕ್ಕೆ ತಲುಪಿದೆ. 114 ಮಂದಿ ಸಾವನ್ನಪ್ಪಿದ್ದು, 326 ಜನ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ 21 ದಿನಗಳ ಲಾಕ್ಡೌನ್ ಇದ್ದರೂ ಕರೊನಾ ಪ್ರಸರಣ ಪ್ರಮಾಣದಲ್ಲಿ ಮಾತ್ರ ಇಳಿಮುಖವಾಗುತ್ತಿಲ್ಲ. ಏ.14ರವರೆಗೆ ಲಾಕ್ಡೌನ್ ಎಂದು ಈ ಮೊದಲು ಘೋಷಿಸಲಾಗಿತ್ತು. ಅವಧಿ ಮುಕ್ತಾಯವಾಗಲು ಇನ್ನೊಂದು ವಾರಗಳಷ್ಟೇ ಬಾಕಿ ಇದೆ. ಆದರೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಈ ಮಧ್ಯೆ ಸರ್ಕಾರಗಳು ಇನ್ನೊಂದು ವಾರವಾದರೂ ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಹೇಳುತ್ತಿವೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲಿಘಿ ಜಮಾತ್ ನಡೆಸಿದ್ದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರು ಹೆಚ್ಚಿನ ಜನರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆ ಧಾರ್ಮಿಕ ಸಭೆಗೆ ಎಲ್ಲ ರಾಜ್ಯಗಳಿಂದ ಅಷ್ಟೇ ಅಲ್ಲದೆ, ಬೇರೆ ದೇಶದವರೂ ಆಗಮಿಸಿದ್ದರು.
ಭಾರತದಲ್ಲಿ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಅಂದರೆ 748 ಸೋಂಕಿತರು ಇದ್ದಾರೆ. ಅದು ಬಿಟ್ಟರೆ ತಮಿಳು ನಾಡಿನಲ್ಲಿ 621, ದೆಹಲಿಯಲ್ಲಿ 523 ಕರೊನಾ ಪ್ರಕರಣಗಳು ಪತ್ತೆಯಾಗಿವೆ.
ಜಗತ್ತಿನಾದ್ಯಂತ ಕರೊನಾ ಸೋಂಕಿತರ ಸಂಖ್ಯೆ 1,346,966ಕ್ಕೆ ತಲುಪಿದೆ. 74 ಸಾವಿರ ಜನರು ಮೃತಪಟ್ಟಿದ್ದಾರೆ. ಅಮೆರಿಕ, ಇಟಲಿ, ಸ್ಪೇನ್, ಯುಕೆಗಳು ಕರೊನಾದಿಂದ ತತ್ತರಿಸಿ ಹೋಗಿವೆ. (ಏಜೆನ್ಸೀಸ್)