

ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಚೀನಾ ನಡೆಯನ್ನು ನಿರಂತರವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಭಾರತ ಹೇಳಿದೆ. ಉಭಯ ದೇಶಗಳ ಸೇನಾಧಿಕಾರಿಗಳ ಸಭೆಯಲ್ಲಿ ಭಾರತ ಈ ವಿಚಾರ ಪ್ರಸ್ತಾಪ ಮಾಡಿದೆ ಎನ್ನಲಾಗಿದೆ.
ಗಡಿಯಿಂದ ಮೊದಲ ಹಂತದ ಸೇನಾ ಹಿಂತೆಗೆತ ಈಗ ಪೂರ್ಣಗೊಂಡಿದೆ. ಇದರ ಸ್ಥಿತಿಗತಿ ಹಾಗೂ ಮುಂದೆ ನಡೆಯಬೇಕಿರುವ ಕ್ರಮಗಳ ಕುರಿತು ಭಾರತ ಹಾಗೂ ಚೀನಾ ಸೇನೆಯ ಕಮಾಂಡರ್ ಹಂತದ ಅಧಿಕಾರಿಗಳ ನಡುವೆ ಮಾತುಕತೆ ನಡೆದಿವೆ. ಈ ಹಿಂದೆ ಸಭೆಯಲ್ಲಿ ಕೈಗೊಳ್ಳಲಾಗಿದ್ದ ಹಲವು ನಿರ್ಣಯಗಳನ್ನು ಚೀನಾ ಉಲ್ಲಂಘಿಸಿದೆ. ಗಡಿಯಲ್ಲಿನ ಟೆಂಟ್ ಹಾಗೂ ಬೃಹತ್ ಉಪಕರಣಗಳನ್ನು ತೆರವು ಮಾಡಲು ಸಭೆಯಲ್ಲಿ ಚೀನಾ ಈ ಹಿಂದೆ ಒಪ್ಪಿಗೆ ನೀಡಿತ್ತು. ಆದರೆ ಹಲವು ದಿನಗಳ ಬಳಿಕವೂ ಅದನ್ನು ತೆರವು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೇನೆ ಹಿಂಪಡೆಯುವಿಕೆ ಕುರಿತು ನಿರಂತರ ಪರಿಶೀಲನೆ ಅಗತ್ಯ ಎಂದು ಭಾರತ ಪ್ರತಿಪಾದಿಸಿದೆ.
ಖಡಕ್ ಸೂಚನೆ: ಎಲ್ಎಸಿಯಿಂದ ಚೀನಾ ಸೇನೆ ಹಿಂದೆ ಸರಿಯಬೇಕು. ಒಪ್ಪಂದ ಪ್ರಕಾರ ನಡೆದುಕೊಳ್ಳಬೇಕು ಎಂದು ಮಾತುಕತೆ ವೇಳೆ ಭಾರತ ಆಗ್ರಹಿಸಿದೆ. ಹಲವು ಫಿಂಗರ್ ಪಾಯಿಂಟ್, ಪ್ಯಾಂಗೊಂಗ್ ತ್ಸೊ ಸರೋವರ ಪ್ರದೇಶದಲ್ಲಿ ಚೀನಾ ಸೇನೆ ಇನ್ನೂ ಬೀಡುಬಿಟ್ಟಿದೆ. ಗಡಿ ಪ್ರದೇಶದಲ್ಲಿ ಟ್ಯಾಂಕ್ಗಳನ್ನು ನಿಯೋಜಿಸಿದೆ.
ಚೀನಾ ಆಪ್ ಡಿಲಿಟ್ ಮಾಡಿದ ಆಪಲ್
ಜುಲೈ ತಿಂಗಳ ಆರಂಭದಿಂದ ಆಪಲ್ ಪ್ಲೇಸ್ಟೋರ್ನಲ್ಲಿನ ಸುಮಾರು 2500 ಚೀನಾ ಆಪ್ಗಳನ್ನು ತೆಗೆದು ಹಾಕಲಾಗಿದೆ. ಭದ್ರತಾ ವಿಚಾರ, ಲೈಸೆನ್ಸ್ ಇನ್ನಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾಗಿ ಆಪಲ್ ಕಂಪನಿ ತಿಳಿಸಿದೆ. ಇವುಗಳಲ್ಲಿ ಬಹುತೇಕ ಗೇಮ್ ಗಳಿಗೆ ಸಂಬಂಧಿಸಿದ ಆಪ್ಗಳಾಗಿವೆ.
ಪಿಒಕೆಯಲ್ಲಿ ಹೆಚ್ಚಿದ ಚೀನಾ ಹೂಡಿಕೆ
ಪಾಕಿಸ್ತಾನ ಹಾಗೂ ಚೀನಾ ನಡುವೆ ಇತ್ತೀಚೆಗೆ ಎರಡು ಬೃಹತ್ ಒಪ್ಪಂದ ಏರ್ಪಟ್ಟಿದೆ. ಈ ಮೂಲಕ ಪಾಕ್ ಆಕ್ರಮಿತ ಪ್ರದೇಶದಲ್ಲಿ ಚೀನಾದ ಹೂಡಿಕೆ ಹೆಚ್ಚಾಗಲಿದೆ. ಒನ್ ಬೆಲ್ಟ್ ಒನ್ ರೋಡ್ ಯೋಜನೆ ಅಡಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. 3.90 ಬಿಲಿಯನ್ ಡಾಲರ್ (-ಠಿ; 29,335 ಕೋಟಿ ಡಾಲರ್) ವೆಚ್ಚದಲ್ಲಿ ಪಿಒಕೆಯಲ್ಲಿ ಚೀನಾ ಎರಡು ವಿದ್ಯುತ್ ಯೋಜನೆಗಳಲ್ಲಿ ಹೂಡಿಕೆ ಮಾಡಲಿದೆ. ಇದೇ ಪ್ರದೇಶದಲ್ಲಿ 7.20 ಬಿಲಿಯನ್ ಡಾಲರ್ (-ಠಿ; 54, 158 ಕೋಟಿ) ಮೊತ್ತದ ರೈಲ್ವೆ ಯೋಜನೆಗೂ ಚೀನಾ ಹಸಿರು ನಿಶಾನೆ ತೋರಿದೆ.